ADVERTISEMENT

ಶೀಘ್ರದಲ್ಲಿ 9ಸಾವಿರ ಶಿಕ್ಷಕರ ನೇಮಕ

ಸಚಿವ ಕಿಮ್ಮನೆ ರತ್ನಾಕರ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:17 IST
Last Updated 17 ಡಿಸೆಂಬರ್ 2013, 4:17 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸೋಮವಾರ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಯು.ಪಿ. ಸಿಂಗ್‌, ಕೆ.ಎಂ. ಶಿವಲಿಂಗೇಗೌಡ, ಅಂಬಿಕಾ ರಾಮಕೃಷ್ಣ, ವಿ. ಅನ್ಬುಕುಮಾರ್‌ ಹಾಗೂ ಸಿ.ಎನ್‌. ಬಾಲಕೃಷ್ಣ ಇದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸೋಮವಾರ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಯು.ಪಿ. ಸಿಂಗ್‌, ಕೆ.ಎಂ. ಶಿವಲಿಂಗೇಗೌಡ, ಅಂಬಿಕಾ ರಾಮಕೃಷ್ಣ, ವಿ. ಅನ್ಬುಕುಮಾರ್‌ ಹಾಗೂ ಸಿ.ಎನ್‌. ಬಾಲಕೃಷ್ಣ ಇದ್ದಾರೆ.   

ಹಾಸನ: ‘ಪ್ರಾಥಮಿಕ ಶಾಲೆಗಳಿಗೆ ಸದ್ಯದಲ್ಲೇ ಒಂಬತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಎಲ್ಲ ಶಾಲೆಗಳಲ್ಲೂ ಎಲ್ಲ ವಿಷಯಗಳ ತಜ್ಞ ಶಿಕ್ಷಕರು ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಹಿಂದೆ ನೇಮಕಾತಿ ಮಾಡಿಕೊಂಡಾಗ ಕೆಲವು ತಪ್ಪುಗಳನ್ನು ಮಾಡಿದ್ದೆವು. ಈಗ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್‌ ಭಾಷೆಯನ್ನು ಪರಿಚಯಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇಂಗ್ಲಿಷ್‌ ಶಿಕ್ಷಕರೇ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ. ಈ ಬಾರಿ ನೇಮಕಾತಿಯಾದಾಗ ಈ ತಪ್ಪನ್ನು ಸರಿಪಡಿಸಲಾಗುವುದು’ ಎಂದರು.

‘ಕಳೆದ 20–25 ವರ್ಷಗಳಲ್ಲಿ ಇಲಾಖೆ ತನ್ನ ಮೇಲೆಯೇ ಕೆಲವು ಆರ್ಥಿಕ ನೀತಿಗಳನ್ನು ಹೇರಿಕೊಂಡಿದೆ. ಇದರಿಂದಾಗಿ ‘ಸಿ’ ದರ್ಜೆ ಸಿಬ್ಬಂದಿ ನೇಮಕವೇ ಆಗಿಲ್ಲ. ನೂರಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಗುತ್ತಿಗೆ ಆಧಾರದಲ್ಲಿ ‘ಸಿ’ ದರ್ಜೆ ಸಿಬ್ಬಂದಿಯನ್ನು ನೇಮಕ ಮಾಡಿದರೂ ಸರ್ಕಾರಕ್ಕೆ ನೂರು ಕೋಟಿ ರೂಪಾಯಿ ಹೊರೆ ಬೀಳುತ್ತದೆ. ಇಂದಿನ ಸ್ಥಿತಿ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ನೇಮಕಾತಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಇಲಾಖೆಯಲ್ಲಿ ಒಟ್ಟಾರೆ 14 ಸಾವಿರ ದಂಪತಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ಏಪ್ರಿಲ್‌–ಮೇ ತಿಂಗಳಲ್ಲಿ ಇಂಥವರಿಗೆ ಕೌನ್ಸಿಲಿಂಗ್‌ ಹಮ್ಮಿಕೊಂಡು ಏಳು ಸಾವಿರ ಮಂದಿಗೆ (ಪತಿ–ಪತ್ನಿಯರಲ್ಲಿ ಒಬ್ಬರಿಗೆ) ಮೂಲ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗುವುದು.

ಪ್ರತಿಯೊಬ್ಬರಿಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ದುಡಿಯಲು ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಮೂರು ವರ್ಷಕ್ಕಿಂತ ಹೆಚ್ಚು ಸಮಯದಿಂದ ಒಂದೇ ಕಡೆ ಇರುವವರನ್ನು ವರ್ಗಾವಣೆ ಮಾಡುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ. ಮಾತ್ರವಲ್ಲದೆ ಇಲಾಖೆಯಲ್ಲಿ 10–15ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರ ಪಟ್ಟಿಯನ್ನೂ ತರಿಸಲಾಗುತ್ತಿದೆ’ ಎಂದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಹಾಗೂ ಸಿ.ಎನ್‌. ಬಾಲಕೃಷ್ಣ ಸಭೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳೂ ತಿಂಗಳಲ್ಲಿ ಕನಿಷ್ಠ 15 ದಿನವಾದರೂ ಪಾಠ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್‌ ಸಚಿವರನ್ನು ವಿನಂತಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಉಪಾಧ್ಯಕ್ಷ ಬಿಳಿ ಚೌಡಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.