ADVERTISEMENT

ಸಂಚಾರಕ್ಕೆ ಸಂಚಕಾರ ತಂದ ಗುಂಡಿಗಳು

ಹಿ.ಕೃ.ಚಂದ್ರು
Published 7 ಅಕ್ಟೋಬರ್ 2017, 8:44 IST
Last Updated 7 ಅಕ್ಟೋಬರ್ 2017, 8:44 IST
ಹಿರೀಸಾವೆ–ನುಗ್ಗೇಹಳ್ಳಿ ರಸ್ತೆಯಲ್ಲಿ ಗುಂಡಿಯುಂಟಾಗಿರುವುದು
ಹಿರೀಸಾವೆ–ನುಗ್ಗೇಹಳ್ಳಿ ರಸ್ತೆಯಲ್ಲಿ ಗುಂಡಿಯುಂಟಾಗಿರುವುದು   

ಹಿರೀಸಾವೆ: ನುಗ್ಗೇಹಳ್ಳಿ–ಹಿರೀಸಾವೆ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಹಲವು ಗುಂಡಿಗಳುಂಟಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಹಿರೀಸಾವೆಯಿಂದ ನುಗ್ಗೇಹಳ್ಳಿಗೆ ಇರುವ 15 ಕಿ.ಮೀ. ರಸ್ತೆಯಲ್ಲಿ ಬೆಳಗೀಹಳ್ಳಿ, ಬದ್ದಿಕೆರೆ, ಹೊಸೂರು, ಕಟಿಕಿಹಳ್ಳಿ, ಅಕ್ಕನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಜನರು ಸಂಚರಿಸುತ್ತಾರೆ. ನುಗ್ಗೇಹಳ್ಳಿಯಿಂದ ತುಮಕೂರು ಜಿಲ್ಲೆಯ ತಿಪಟೂರು ಕಡೆಗೂ ಈ ರಸ್ತೆಯಲ್ಲಿ ಕೊಬ್ಬರಿ ಮತ್ತಿತರ ಸರಕು ವಾಹನಗಳು ಸಂಚರಿಸುತ್ತವೆ.

ಹಲವು ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರ್‌ ಹಾಕಲಾಗಿತ್ತು. ಈಚಿನ ದಿನಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲಲ್ಲಿ ದೊಡ್ಡ ಹಳ್ಳಗಳು ಉಂಟಾಗಿವೆ. ಮಳೆ ಬಂದ ಸಮಯದಲ್ಲಿ ಚಾಲಕರು ವಾಹನ ಚಲಾಯಿಸಲು ಹರಸಾಹಸ ಪಡುತ್ತಿದ್ದಾರೆ.

ಹಿರೀಸಾವೆ ಮತ್ತು ನುಗ್ಗೇಹಳ್ಳಿಗಳ ಶಾಲೆ ವಾಹನಗಳು, ಸರಕು ವಾಹನಗಳು, ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳು ಸೇರಿದಂತೆ ಹಲವು ಆಟೊಗಳು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತಿವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಬಸ್‌ ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಶಾಲೆ– ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ADVERTISEMENT

ಹಿರೀಸಾವೆ ಹೋಬಳಿಯ ದಿಡಗದಿಂದ ನುಗ್ಗೇಹಳ್ಳಿ ಹೋಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆ 14 ಕಿ.ಮೀ ಇದ್ದು, ಈ ರಸ್ತೆಯೂ ಹದಗೆಟ್ಟಿದೆ. ನುಗ್ಗೇಹಳ್ಳಿಯಿಂದ ದಿಡಗ, ತುರುವೇಕೆರೆ ತಾಲ್ಲೂಕಿನ ದಬ್ಬೆಘಟ್ಟ ಹೋಬಳಿಯ ಗಡಿ ಗ್ರಾಮಗಳಿಗೆ ಈ ರಸ್ತೆ ಮೂಲಕ ಹೋಗಬೇಕಿದೆ. ಈ ಎರಡೂ ರಸ್ತೆಗಳಲ್ಲಿ ಬೈಕ್‌ ಸವಾರರು ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು, ಕೈ ಕಾಲು ಮುರಿದುಕೊಂಡಿರುವ ಘಟನೆಗಳೂ ಸಹ ನಡೆದಿವೆ. ಅಕ್ಕನಹಳ್ಳಿ ಬಳಿ ಮಳೆಯ ನೀರು ರಸ್ತೆಯನ್ನು ಕೊರೆದು ಚರಂಡಿಯಂತಾಗಿದೆ. ರಾತ್ರಿ ಸಮಯದಲ್ಲಿ ಈ ಎರಡು ರಸ್ತೆಗಳಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಎನ್ನುತ್ತಾರೆ ಸೋಸಲಗೆರೆಯ ಶ್ರೀನಿವಾಸ್.

ಶಾಸಕ ಸಿ.ಎನ್‌. ಬಾಲಕೃಷ್ಣ ಅವರನ್ನು ಸಂಪರ್ಕಿಸಿದಾಗ, ‘ಈ ಎರಡು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು. ಸಂಬಂಧಿಸಿದವರು ಎರಡೂ ರಸ್ತೆಗಳನ್ನು ಸರಿಪಡಿಸಿದರೆ ಹಿರೀಸಾವೆ, ನುಗ್ಗೇಹಳ್ಳಿ ಹೋಬಳಿಯ ಹತ್ತಾರು ಗ್ರಾಮಗಳ ಜನರ ಓಡಾಟಕ್ಕೆ ಅನುಕೂಲವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.