ADVERTISEMENT

ಸಂತೆ ಮೈದಾನದಲ್ಲಿ ಕಸದ ರಾಶಿ: ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 8:35 IST
Last Updated 5 ಅಕ್ಟೋಬರ್ 2012, 8:35 IST
ಸಂತೆ ಮೈದಾನದಲ್ಲಿ ಕಸದ ರಾಶಿ: ಕಿರಿಕಿರಿ
ಸಂತೆ ಮೈದಾನದಲ್ಲಿ ಕಸದ ರಾಶಿ: ಕಿರಿಕಿರಿ   

ರಾಮನಾಥಪುರ: ಇಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡದ ಹಿಂಭಾಗದ ಸಂತೆ ಮೈದಾನದಲ್ಲಿ ಬಿದ್ದಿರುವ ಕಸದ ರಾಶಿ ವಿಲೇವಾರಿಯಾಗದೇ ಅನಾರೋಗ್ಯದ ತಾಣವಾಗಿದೆ.

ಸಂತೆ ಮೈದಾನದ ತ್ಯಾಜ್ಯವನ್ನು ಬೇರೆಡೆಗೆ ವಿಲೇವಾರಿ ಮಾಡಲು ಸ್ಥಳಾವಕಾಶದ ಕೊರತೆ ಇರುವ ಕಾರಣ ಪಂಚಾಯಿತಿಯವರು ಕೆಲ ತಿಂಗಳಿನಿಂದ ಕಟ್ಟಡದ ಹಿಂಭಾಗ ಒಂದೆಡೆ ರಾಶಿ ಹಾಕುತ್ತಿದ್ದಾರೆ. ಹೀಗಾಗಿ ಸಂತೆಗೆ ಬರುವ ವ್ಯಾಪಾರಸ್ಥರೆಲ್ಲ ಮೂಗು ಮುಚ್ಚಿಕೊಂಡು ತಿರುಗಾಡಬೇಕಿದೆ. ಮೈದಾನದ ಆಸುಪಾಸು ವಾಸಿಸುವ ನಿವಾಸಿಗಳಂತೂ ಪ್ರತಿನಿತ್ಯ ಸಹಿಸಲಾಗದ ಗಬ್ಬು ವಾಸನೆ ಸೇವಿಸಿ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಲೇವಾರಿ ಸಮಸ್ಯೆ: ಪಂಚಾಯಿತಿ ವ್ಯಾಪ್ತಿಯ ರಾಮನಕೊಪ್ಪಲು ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಅರಣ್ಯ ಇಲಾಖೆಗೆ ಸೇರಿದ ಜಮೀನು ಗುರುತಿಸಲಾಗಿದೆ. ಈ ಬಗ್ಗೆ ಕಳೆದ ನಾಲ್ಕೈದು ತಿಂಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ಹಲವು ಸಲ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಸಲ್ಲಿಸಲಾಗಿದೆ.
 
ಆದರೆ ಈವರೆಗೂ ಮಂಜೂರಾಗದ ಕಾರಣ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಪಟ್ಟಣದ ತ್ಯಾಜ್ಯವನ್ನು ಎಲ್ಲಿಗೆ ಸಾಗಿಸಬೇಕು ಎಂಬುದು ಸಮಸ್ಯೆಯಾಗಿದೆ ಎನ್ನುತ್ತಾರೆ ಪಿಡಿಒ ನಟರಾಜ್.

ಅಭಿವೃದ್ಧಿ ಮರೀಚಿಕೆ: 1996ರಲ್ಲಿ ಶಿರದನಹಳ್ಳಿ ತಿಪ್ಪೇಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಟ್ಟಿದ ಸಂತೆ ಈವರೆಗೂ ಸರಿಯಾಗಿ ಅಭಿವೃದ್ದಿ ಕಾಣದಾಗಿದೆ. ಉದ್ಯೋಗ ಖಾತ್ರಿ ಸೇರಿದಂತೆ ಹಲವಾರು ಯೋಜನೆಗಳಡಿ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಿ ಸಂತೆ ಮೈದಾನ ಸಮತಟ್ಟುಗೊಳಿಸಿದರೂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ನಿವಾಸಿಗಳು ದೂರುತ್ತಾರೆ.

ಇದರಿಂದಾಗಿ ವಾರದ ಸೋಮವಾರ ಸಂತೆಗೆ ವ್ಯಾಪಾರಕ್ಕೆಂದು ಬರುವ ನೂರಾರು ರಾಸುಗಳು ಮೈದಾನದಲ್ಲಿ ನಿಂತಿರುವ ತ್ಯಾಜ್ಯದ ಕೆಸರಿನ ಮೇಲೆಯೇ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಶೀಘ್ರವೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.