ADVERTISEMENT

ಸಂತೆ ಮೈದಾನದಲ್ಲಿ ಸಮಸ್ಯೆಗಳ ಕಂತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:55 IST
Last Updated 26 ಸೆಪ್ಟೆಂಬರ್ 2013, 8:55 IST

ಹಳೇಬೀಡು: ಸಂತೆ ಮೈದಾನದಲ್ಲಿ ಆಗಾಗ್ಗೆ ಅಭಿವೃದ್ಧಿ ಕೆಲಸ ­ನಡೆಯುತ್ತಿದ್ದರೂ ವ್ಯಾಪಾರಿಗಳು ಹಾಗೂ ರೈತರು ಕಷ್ಟ ಅನುಭವಿಸುವುದು ತಪ್ಪಿಲ್ಲ.
ಸಂತೆ ಮೈದಾನದಲ್ಲಿ ಒಂದು ಶೆಲ್ಟರ್‌ ಮಾತ್ರ ಇರುವುದರಿಂದ ಕೆಲವು ವ್ಯಾಪಾರಿಗಳಿಗೆ ಮಾತ್ರ ಸುರಕ್ಷತೆ ನೀಡಿದಂತಾಗಿದೆ.

ಐದು ವರ್ಷದ ಹಿಂದೆ ನಬಾರ್ಡ್‌ ಯೋಜನೆ ಅನುದಾನದಲ್ಲಿ ಗ್ರಾಮೀಣ ಸಂತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೇಲೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಂದು ಶೆಲ್ಟರ್‌ ನಿರ್ಮಿಸಿರುವುದನ್ನು ಹೊರತು ಪಡಿಸಿದರೆ, ಛಾವಣಿ ಇರುವ ಕಟ್ಟಡ ನಿರ್ಮಾಣವಾಗಿಲ್ಲ. ಹೀಗಾಗಿ ಬಹುತೇಕ ವರ್ತಕರಿಗೆ ಶೆಲ್ಟರ್‌ ಸೌಲಭ್ಯ ಇಲ್ಲವಾಗಿದೆ.

ಸುಮಾರು 10 ವರ್ಷದ ಹಿಂದೆ ತಾಲ್ಲೂಕು ಪಂಚಾಯಿತಿ ನಿರ್ಮಿಸಿದ ಕಟ್ಟೆಗಳಲ್ಲಿ ಗಿಡ ಬೆಳೆಯುತ್ತಿದ್ದು, ಕುಸಿಯುವ ಸ್ಥಿತಿಗೆ ತಲುಪಿವೆ. ಇದೇ ರೀತಿ ಮುಂದುವರಿದರೆ ವ್ಯಾಪಾರಕ್ಕೆ ಸೂಕ್ತ ಸ್ಥಳವೇ ಇಲ್ಲವಾಗುತ್ತದೆ ಎನ್ನುತ್ತಾರೆ ಸಂತೆ ವ್ಯಾಪಾರಿಗಳು.

ಅಲ್ಲದೇ ಸಂತೆ ನಡೆಯುವ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಕೂಡ ಇಲ್ಲ. ಗ್ರಾಮ ಪಂಚಾಯಿತಿ ನೀರಿನ ತೊಟ್ಟಿ ನಿಮಿರ್ಸಿದ್ದರೂ ಸ್ವಚ್ಛ ನೀರು ದೊರಕುತ್ತಿಲ್ಲ.
ರೈತರು ಹಾಗೂ ವರ್ತಕರು ಮುಂಜಾನೆಯೇ ಸಂತೆಗೆ ಬಂದು ವ್ಯಾಪಾರ ಮುಗಿಸಿ ರಾತ್ರಿ 7 ಗಂಟೆ ಬಳಿಕವೇ ಹಿಂದಿರುಗುತ್ತಾರೆ. ಈ ವೇಳೆ ವಿದ್ಯುತ್‌ ದೀಪದ ಬೆಳಕಿನ ವ್ಯವಸ್ಥೆಯೂ ಇಲ್ಲದಾಗಿದೆ.

ಹಳೇಬೀಡು ಸಂತೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನಗರದ ಮಾರುಕಟ್ಟೆ ಹಾಗೂ ಹೊರ ರಾಜ್ಯಗಳಿಗೆ ತೆಂಗಿನಕಾಯಿ ಸರಬರಾಜಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಸಂತೆ ಮೈದಾನದ ಅಭಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ ಎಂಬುದು ರೈತರ ಒತ್ತಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.