ADVERTISEMENT

ಸಂವಾದವೇ ಇಲ್ಲದಂಥ ಸ್ಥಿತಿ: ಬಾನು ಮುಷ್ತಾಕ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 5:36 IST
Last Updated 22 ಸೆಪ್ಟೆಂಬರ್ 2014, 5:36 IST

ಹಾಸನ: ‘ಸಮಾಜದ ಆಗು ಹೋಗುಗಳಿಗೆ ನಿರ್ಭಯವಾಗಿ ಸ್ಪಂದಿಸುತ್ತಿದ್ದ ನಮ್ಮಂಥ ಅನೇಕ ಕವಿಗಳಿಗೆ ಇಂದು ಸಂತೆಯಲ್ಲಿ ಅನಾಥವಾಗಿ ನಿಂತ ಸ್ಥಿತಿ ಎದುರಾಗಿದೆ’ ಎಂದು ಲೇಖಕಿ ಬಾನು ಮುಷ್ತಾಕ್‌ ಹೇಳಿದರು.

‘ಕಾಜಾಣ’ ಸಂಸ್ಥೆಯವರು ಭಾನುವಾರ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿ ‘ಕಾವ್ಯ ಕಾಜಾಣ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾತು ನಿಲ್ಲಬಾರದು ಎಂದು ಹಿಂದೆ ಯು.ಆರ್‌. ಅನಂತಮೂರ್ತಿ ಹೇಳುತ್ತಿದ್ದರು. ಆದರೆ ಇಂದು ನಮ್ಮ ಮಾತನ್ನು ಯಾರೋ ಕಸಿಯುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಪ್ರಭುತ್ವದ ಹಾದಿ ನಮಗೆ ಅರ್ಥವಾಗುತ್ತಿಲ್ಲ. ಸಾರ್ವಜನಿಕವಾಗಿ ಸಂವಾದವೇ ಇಲ್ಲದಂಥ ಸ್ಥಿತಿಯಲ್ಲಿ ನಾವಿಂದು ಇದ್ದೇವೆ. ಇಂಥದ್ದರಲ್ಲೂ ಮಾತನ್ನು ಉಳಿಸಿಕೊಳ್ಳಬೇಕಾದುದೇ ಇಂದಿನ ತುರ್ತು ಎಂದರು.

‘ಉರ್ದು ಸಾಹಿತ್ಯದ ಮುಷಾಯರಾಗಳಲ್ಲಿ ಇರುವಂತೆ ನಮ್ಮಲ್ಲಿ ಕವಿಯ ಕಾವ್ಯಕ್ಕೆ ನೇರಾನೇರ ಪ್ರತಿಕ್ರಿಯೆ ಬರುವ ವ್ಯವಸ್ಥೆ ಇಲ್ಲ. ಕಾವ್ಯವನ್ನು ಜನಕ್ಕೆ ಮುಟ್ಟುವಂತೆ ಓದುವ ಕಲೆ ಬೆಳೆಸಿಕೊಂಡರೆ ಬಹುಶಃ ನಮ್ಮಲ್ಲೂ ಆ ವ್ಯವಸ್ಥೆ ಮಾಡಬಹುದು. ಕವಿಗಳು ಕಾವ್ಯವನ್ನು ಅಭಿನಯಿಸುವ ಸಾಧ್ಯತೆ ಬಗ್ಗೆ ಚಿಂತಿಸಬೇಕು’ ಎಂದು ಬಾನು ಮುಷ್ತಾಕ್‌ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕವಯಿತ್ರಿ ರೂಪ ಹಾಸನ, ‘ಧ್ಯಾನಸ್ಥ ಸ್ಥಿತಿಯಲ್ಲಿದ್ದು ಒಂದು ಕವನ ರಚಿಸಿದ ಬಳಿಕ, ಕವಿ ಅದರಿಂದಾಚೆ ಬಂದು ಓದುಗರ ಹೃದಯದಲ್ಲಿ ಕವನ ಬೆಳೆಯುವುದನ್ನು ನೋಡುತ್ತಿರಬೇಕು. ಆದರೆ ಇಂದು ಅದಕ್ಕೆ ಬೇಕಾದಂಥ ವಾತಾವರಣ ಇದೆಯೇ ಎಂಬ ಸಂದೇಹವೂ ಮೂಡುತ್ತದೆ’ ಎಂದರು.

‘ಕವನ ಚೆನ್ನಾಗಿದೆಯೇ, ಅಥವಾ ಇಲ್ಲವೇ ಎಂದು ನೋಡುವ ಬದಲು ಇದು ಉಳಿಯುವ ಕವಿತೆಯೇ ಅಥವಾ ಅಳಿಯುವುದೇ ಎಂಬ ಬಗ್ಗೆ ಹೆಚ್ಚು ಚಿಂತಿಸಬೇಕು. ಮಾಧ್ಯಮಗಳು ಇಂದು ನಮ್ಮನ್ನು ಅಸೂಕ್ಷ್ಮಗೊಳಿಸುತ್ತಿವೆ. ಭಾವನೆಗಳನ್ನು ತಿಳಿಯಾಗಿಸುತ್ತವೆ. ಆದ್ದರಿಂದ ಮಾಧ್ಯಮಗಳನ್ನೂ ಅಲ್ಲಾಡಿಸುವಂಥ, ಮತ್ತು ದೀರ್ಘ ಕಾಲ ಉಳಿಯುವಂಥ ಕವನ ರಚಿಸುವತ್ತ ಗಮನ ಕೊಡಬೇಕು’ ಎಂದು ರೂಪ ಹಾಸನ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಹಲವು ಸಂಸ್ಥೆಗಳು ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಚ್‌.ಎಲ್‌. ಜನಾರ್ದನ ಹರ್ಷ ವ್ಯಕ್ತಪಡಿಸಿದರು.

ಸಂಸ್ಕೃತಿ ಚಿಂತಕಿ ಡಾ.ಬಿ.ಯು. ಸುಮಾ ಹಾಗೂ ಉಪನ್ಯಾಸಕ ರವೀಂದ್ರ ವೇದಿಕೆಯಲ್ಲಿದ್ದರು. ಕಾಜಾಣ ಸಂಸ್ಥೆಯ ಬೇಲೂರು             ರಘುನಂದನ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಗೋಷ್ಠಿಯಲ್ಲಿ 17 ಕವಿಗಳು ಕವನಗಳನ್ನು ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.