ಹಾಸನ: `ಇಂದಿನ ಸಿನಿಮಾ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಲೋಕ ಹಾಳಾಗುತ್ತಿದೆ' ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಆಲೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ರಾಜಾರಾವ್ ವೇದಿಕೆಯಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಕನ್ನಡ ಭಾಷೆಗೆ ಇರುವ ಶ್ರೀಮಂತಿಕ ಬೇರೆ ಯಾವ ಭಾಷೆಗೂ ಇಲ್ಲ. ಹೊರ ರಾಷ್ಟ್ರಗಳಲ್ಲಿರುವ ಕನ್ನಡಿಗರು ಭಾಷೆಯನ್ನು ಪ್ರೀತಿಸಬೇಕು. ಇಂಗ್ಲಿಷ್ ವ್ಯಾಮೋಹ ಹಾಗೂ ಸಿನಿಮಾ ಸಾಹಿತ್ಯದಿಂದ ಕನ್ನಡ ಸ್ವಲ್ಪ ಮಟ್ಟಿಗೆ ಕುಂಠಿತಗೊಳ್ಳುತ್ತಿದೆ. ಕೆಲವು ಯುವ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಹಾದಿ ತಪ್ಪುವಂತೆ ಮಾಡುತ್ತಿದ್ದಾರೆ. ಅಂಥ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಗಳಿಂದ ದೂರವಿಡಬೇಕು ಎಂದರು.
ಆಶಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ, `ಹಿಂದೆ ಇತರ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಹೆಚ್ಚಾಗಿದ್ದರೂ ಅದರ ಮಧ್ಯದಲ್ಲೇ ಕನ್ನಡ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆದಿತ್ತು. ಈಗ ಇಂಗ್ಲಿಷ್ ಕನ್ನಡಕ್ಕೆ ಮಾರಕವಾಗುತ್ತಿದೆ. ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿರುವುದರಿಂದ ಪರೋಕ್ಷವಾಗಿ ಸರ್ಕಾರವೇ ಕನ್ನಡ ಭಾಷೆಯ ಅಳಿವಿಗೆ ಕಾರಣವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡದೆ, ಇರುವ ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶ ಮಾಡಬೇಕು' ಎಂದರು.
ಮಾಧ್ಯಮ ಜಾಗೃತಗೊಳ್ಳಲಿ:
ಶಾಲಾ ಶಿಕ್ಷಕರ ಜತೆಗೆ ಮಾಧ್ಯಮಗಳು ಸಹ ಕನ್ನಡ ಭಾಷೆಯನ್ನು ಕಟ್ಟಿ ಬೆಳಸುವ ಜವಬ್ದಾರಿ ಹೊರಬೇಕು. ಆದರೆ ಮಾಧ್ಯಮಗಳು ಈ ಜವಾಬ್ದಾರಿಯಿಂದ ದೂರ ಉಳಿಯುತ್ತಿರುವುದು ಬೇಸರದ ವಿಚಾರ. ಮಾಧ್ಯಮಗಳು ತಮ್ಮ ಜವಾಬ್ದಾರಿ ಅರಿತು ನಾಡು ನುಡಿಯ ಅಭಿವೃದ್ಧಿಗೆ ಸಹಕರಿಸಬೇಕಾದ ಅವಶ್ಯಕತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗುಲಾಂ ಸತ್ತಾರ `ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ವಿಷಾದದ ಸಂಗತಿ. ಸರ್ಕಾರ ಇದರ ಬಗ್ಗೆ ಚಿಂತನೆ ನಡೆಸಬೇಕಾದ ಅವಶ್ಯ ಇದೆ. ಕರ್ನಾಟಕ ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ಪ್ರಜೆಯೂ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಮಾತೃ ಭಾಷೆಯನ್ನು ಗೌರವಿಸಬೇಕು' ಎಂದರು.
ಸಮ್ಮೇಳನ ಉದ್ಘಾಟನೆಗೂ ಮುನ್ನ, ಮುಂಜಾನೆ ತಹಶೀಲ್ದಾರ್ ರವಿಚಂದ್ರ ನಾಯಕ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್.ಎಲ್. ಜನಾರ್ದನ ಕನ್ನಡ ಧ್ವಜಾರೋಹಣ ಹಾಗೂ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಅಧ್ಯಕ್ಷ ಗುಲಾಂ ಸತ್ತಾರ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ನಂತರ ನಗರದಲ್ಲಿ ಸಮ್ಮೇಳನಾಧ್ಯಕ್ಷರ ಮೇರವಣಿಗೆ ನಡೆಯಿತು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಹೀರಣ್ಣಗೌಡ ಅವರು ಇದಕ್ಕೆ ಚಾಲನೆ ನೀಡಿದರು. ವೀರಗಾಸೆ, ಡೊಳ್ಳು ಕುಣಿತ ಹಾಗೂ ಪೂರ್ಣ ಕುಂಭ ಕಳಶದೊಂದಿಗೆ ಪಟ್ಟಣ ಒಕ್ಕಲಿಗರ ಸಮುದಾಯದ ಆಲೂರು ರಾಜಾರಾವ್ ವೇದಿಕೆಯವರೆಗೆ ಮೆರವಣಿಗೆ ನಡೆಯಿತು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಸಾಹಿತಿ ಪ್ರೊ. ಸೈಯದ್ ಶಹಾಬುದ್ಧೀನ್, ಸಮ್ಮೇಳನಾಧ್ಯಕ್ಷ ನಾಗರಾಜು, ತಾ.ಪಂ. ಅಧ್ಯಕ್ಷೆ ಯಶೋದಾ ಹರೀಶ್, ತಾ.ಪಂ. ಸಿ.ಇ.ಒ. ಶಿವುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪುಷ್ಪಲತಾ, ತಾಲ್ಲೂಕು ವೈದ್ಯಾಧಿಕಾರಿ ಡಾ. ತಿಮ್ಮಯ್ಯ, ಶಿಶು ಅಭಿವೃದ್ಧಿ ಅಧಿಕಾರಿ ಎ.ಟಿ. ಮಲ್ಲೇಶ್, ಸಮಾಜ ಕಲ್ಯಾಣಾಧಿಕಾರಿ ಡಾ. ಜಿ. ಸಂತೋಷ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಪದವಿ ಕಾಲೇಜು ಪ್ರಾಂಶುಪಾಲ ಚಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉಪಾಧ್ಯಕ್ಷ ಹರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.