ADVERTISEMENT

ಸೋಮಶೇಖರ್ ವಿರುದ್ಧ ಕ್ರಮಕ್ಕೆ ಆಗ್ರಹ

ಆಲೂರು-–ಸಕಲೇಶಪುರ ಕ್ಷೇತ್ರದಲ್ಲಿ ಹಣ, ಬಟ್ಟೆ ಹಂಚಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:44 IST
Last Updated 31 ಮಾರ್ಚ್ 2018, 9:44 IST

ಹಾಸನ: ‘ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಆಲೂರು-ಸಕಲೇಶ ಪುರ ಮೀಸಲು ಕ್ಷೇತ್ರದಲ್ಲಿ ಮತದಾರರಿಗೆ ಹಣ, ಬಟ್ಟೆ ಹಂಚಿಕೆ ಮಾಡುತ್ತಿರುವ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾರ್ವೆ ಸೋಮಶೇಖರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ದಲಿತ ಮಾನವ ಹಕ್ಕುಗಳ ವಿಮೋಚನಾ ವೇದಿಕೆ ಸಂಚಾಲಕ ಮರಿಜೋಸೆಫ್ ಅವರು ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಒತ್ತಾಯಿಸಿದರು.‘ಮತದಾರರಿಗೆ ನಾನಾ ಆಮಿಷ ವೊಡ್ಡುತ್ತಿರುವ ಸೋಮಶೇಖರ್ ಮತ್ತು ಬೆಂಬಲಿಗರ ವಿರುದ್ಧ ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ಚುನಾವಣಾಧಿಕಾರಿ ವಿಫಲವಾಗಿದ್ದಾರೆ. ನೀತಿ ಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸದ ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಚಾಲಕ ನಾಗರಾಜು ಹೆತ್ತೂರು ಮಾತನಾಡಿ, ‘ಕ್ಷೇತ್ರದ ಜನರಿಗೆ ಬಾಡೂಟದ ಜತೆಗೆ ಮದ್ಯ ಪೂರೈಸಲಾಗುತ್ತಿದೆ. ಮೂರು ದಿನಗಳಿಂದ ಮತದಾರರಿಗೆ ವಿತರಿಸುತ್ತಿರುವ ಹಣ, ಸೀರೆ, ಪ್ಯಾಂಟ್ ಪೀಸ್‌ಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಿದರು.‘ಸೋಮಶೇಖರ್ ಭಾವಚಿತ್ರವಿರುವ ಬ್ಯಾಗ್‌ಗಳನ್ನು ಎಲ್ಲೆಡೆ ಹಂಚಲಾಗುತ್ತಿದೆ. ಇದು ಕ್ಷೇತ್ರದ ಮತದಾರರ ಮೇಲೆ ಹಾಗೂ ಚುನಾವಣೆ ಮೇಲೆ ಗಂಭೀರ ಪ್ರಭಾವ ಬೀರಲಿದೆ. ಕೂಡಲೇ ಅಧಿಕಾರಿಗಳು ಕಟ್ಟಾಯ ಹೋಬಳಿಯ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ರಾಮಚಂದ್ರ, ರಮೇಶ್, ನವೀನ್‌ ಸದಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.