ADVERTISEMENT

ಸೌಲಭ್ಯ ನೀಡುವಲ್ಲಿ ತಾರತಮ್ಯ: ಸಂಘಟನೆಗಳ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:55 IST
Last Updated 21 ಜನವರಿ 2011, 8:55 IST

ಹಾಸನ: ‘ಸ್ವಸಹಾಯ ಸಂಘಗಳಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದ್ದು, ಅದನ್ನು ನಿಲ್ಲಿಸಬೇಕು. ದಿನಬಳಕೆ ವಸ್ತುಗಳ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು ಇದನ್ನು ನಿಯಂತ್ರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಸುಮಾರು 400ಕ್ಕೂಹೆಚ್ಚು ಮಹಿಳೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜೀವನಜ್ಯೋತಿ ಜಿಲ್ಲಾ ಮಹಿಳಾ ಒಕ್ಕೂಟ, ಸಾಧನಾ ತಾಲ್ಲೂಕು ಮಹಿಳಾ ಒಕ್ಕೂಟ, ದಲಿತ ವಿಮೋಚನಾ ಮತ್ತು ಮಾನವ ಹಕ್ಕುಗಳ ವೇದಿಕೆ, ಸೇವಾ ಸಂಗಮ, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜೀವನಜ್ಯೋತಿ ಜಿಲ್ಲಾ ಒಕ್ಕೂಟ ಜಿಲ್ಲೆಯಲ್ಲಿ 16,973 ಸಂಘಗಳನ್ನು ರಚಿಸಿದೆ. ಆದರೆ ಸರ್ಕಾರ ಸ್ತ್ರೀಶಕ್ತಿ ಸಂಘಟನೆಗಳ ಮೂಲಕ  ಜಾರಿಗೊಳಿಸುವ ವಿವಿಧ ಯೋಜನೆಗಳಿಗಾಗಿ ಈ ಸಂಘಗಳನ್ನು ಪರಿಗಣಿಸದೆ ತಾರತಮ್ಯ ಎಸಗಿದೆ. ಸರ್ಕಾರ ಎಲ್ಲ ಸಂಘಗಳನ್ನು ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಡಜನರು ತತ್ತರಿಸಿದ್ದಾರೆ. ಕೂಡಲೇ ಇದನ್ನು ನಿಯಂತ್ರಿಸಬೇಕು, ಜಿಲ್ಲೆಯ ಬಹುತೇಕ ಎಲ್ಲ ರಸ್ತೆಗಳೂ ಕೆಟ್ಟು ಸಂಚರಿಸಲು ಸಾಧ್ಯವಾಗದಂಥ ಸ್ಥಿತಿಗೆ ಬಂದಿವೆ. ಕೂಡಲೇ ಇವುಗಳನ್ನು ದುರಸ್ತಿ ಮಾಡಬೇಕು, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಏರ್ಪಡಿಸಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೆಲಸದ ಅವಧಿಯನ್ನು 100 ದಿನದಿಂದ 300 ದಿನಕ್ಕೆ ಹೆಚ್ಚಿಸಬೇಕು  ಮತ್ತು ಕೂಲಿಯ ಮೊತ್ತವನ್ನು 300 ರೂಪಾಯಿಗೆ ಹೆಚ್ಚಿಸಬೇಕು, ಪಡಿತರ ವ್ಯವಸ್ಥೆಯಲ್ಲಿ ಯೂನಿಟ್ ವ್ಯವಸ್ಥೆಯನ್ನು ಬಿಟ್ಟು ಬಡವರಿಗೆ 28ಕೆ.ಜಿ. ಅಕ್ಕಿ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರದ ಹೇಮಾವತಿ ಪ್ರತಿಮೆಯ ಮುಂದಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಮಹಿಳೆಯರು ಸ್ವಲ್ಪ ಹೊತ್ತು ಎನ್.ಆರ್. ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದರು. ಅಲ್ಲಿ ಮನವಿ ಸಲ್ಲಿಸಿ ಪ್ರತಿಭಟನೆ ಕೊನೆಗೊಳಿಸಿದರು.

ಮುಖಂಡರಾದ ಕೃಷ್ಣದಾಸ್, ಮರಿ ಜೋಸೆಫ್, ರೇಣುಕಾ, ಶಾಂತಮ್ಮ ಮುಂತಾದವರು ಮುಂದಾಳತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.