ADVERTISEMENT

ಸ್ವರ್ಣಗೌರಿಗೆ ಅದ್ದೂರಿ ವಿದಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 4:50 IST
Last Updated 16 ಅಕ್ಟೋಬರ್ 2012, 4:50 IST

ರಾಮನಾಥಪುರ: ಗೌರಿ ಹಬ್ಬದ ಪ್ರಯುಕ್ತ ಕಾಳೇನಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಸ್ವರ್ಣಗೌರಿ ಮೂರ್ತಿ ವಿಸರ್ಜನಾ ಕಾರ್ಯಕ್ರಮ ಸೋಮವಾರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.

ಗ್ರಾಮದ ಐತಿಹಾಸಿಕ ಗೌರಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಸ್ವರ್ಣಗೌರಿ ಮೂರ್ತಿಗೆ ಪೂಜಾ ವಿಧಿ- ವಿಧಾನಗಳು ಕಳೆದ 30 ದಿನಗಳಿಂದ ಸಾಂಗವಾಗಿ ನಡೆದವು. ಪ್ರತಿನಿತ್ಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಸೋಮವಾರ ಬೆಳಿಗ್ಗೆ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಗ ಹೂವಿನಿಂದ ಸಿಂಗರಿಸಿದ್ದ ಅಂಲಕೃತ ಉತ್ಸವ ಅಡ್ಡೆ ಮೇಲೆ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಉತ್ಸವ ಅಡ್ಡೆ ಸಾಗುವ ಹಾದಿಯುದ್ದಕ್ಕೂ ಭಕ್ತರು ಈಡುಗಾಯಿ ಒಡೆದು ಪೂಜೆ, ಪುನಸ್ಕಾರ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ನಂತರ ಗ್ರಾಮದ ದೊಡ್ಡಕೆರೆ ಬಳಿ ಕೊಂಡೊಯ್ದು ಪೂಜಾ ವಿಧಾನ ಪೂರೈಸಿದ ಬಳಿಕ ದೇವಿಯ ಮೂರ್ತಿಯನ್ನು ತೆಪ್ಪದ ಮೇಲೆ ಕೂರಿಸಲಾಯಿತು. ಜತೆಗೆ ಸಂಪ್ರದಾಯದಂತೆ ಗ್ರಾಮ ದೇವತೆ ದಿಡ್ಡಮ್ಮ ದೇವರ ಮೂರ್ತಿಯನ್ನು ಸಹ ಪ್ರತ್ಯೇಕ ತೆಪ್ಪದ ಮೇಲೆ ಕೂರಿಸಿ ಜೋಡಿ ತೆಪ್ಪೋತ್ಸವ ನಡೆಸಲಾಯಿತು.

ಕೆರೆಯಲ್ಲಿ ಸಂಚರಿಸುತ್ತಿದ್ದ ತೆಪ್ಪೊತ್ಸವ ವೀಕ್ಷಿಸಲು ಸಾವಿರಾರು ಜನ ಜಮಾಯಿಸಿದ್ದರು. ದೇವರ ಮೂರ್ತಿ ಹೊತ್ತ ತೆಪ್ಪ ಮೂರು ಸುತ್ತ ಪ್ರದಕ್ಷಿಣೆ ಹಾಕಿದ ನಂತರ ನೆರೆದಿದ್ದ ಭಕ್ತರ ಜಯ ಘೋಷಗಳ ನಡುವೆ ಗೌರಮ್ಮ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜನತೆಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.