ADVERTISEMENT

`ಹಗರಣಗಳಲ್ಲಿ ಮುಳುಗಿದ ಕಾಂಗ್ರೆಸ್, ಬಿಜೆಪಿ'

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 4:48 IST
Last Updated 8 ಏಪ್ರಿಲ್ 2013, 4:48 IST

ಮಳವಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಿ ಸಿಪಿಐ(ಎಂ) ಅನ್ನು ಬೆಂಬಲಿಸಿ ಎಂದು ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ ಮನವಿ ಮಾಡಿದರು.

ಇದೇ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಪಟ್ಟಣದ  ರೋಟರಿ ಶಾಲೆ ಸಮೀಪ ಆಯೋಜಿಸಿದ್ದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವಗಲೂ ಸಿಂಹಾಸನ ಕನಸು ಕಾಣುವ ಕಾಂಗ್ರೆಸ್, ದುಶ್ಯಾಸನ ನೀತಿಯ ಬಿಜೆಪಿ ಎರಡು ಪಕ್ಷಗಳನ್ನು ಜನರು ತಿರಸ್ಕರಿಸಿ ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರ ವಿವಿಧ ಹಗರಣದಲ್ಲಿ ಸಂಪೂರ್ಣವಾಗಿ ಮುಳುಗಿದೆ. ಇದಕ್ಕೆ ಪೂರಕವಾಗಿ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್‌ವೆಲ್ತ್  ಕ್ರೀಡಾಕೂಟದ ಹಗರಣ, ಕಲ್ಲಿದ್ದಲು ಹಗರಣಗಳಲ್ಲಿ ಹಣ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯು ಗುಜರಾತ್‌ನಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನರಮೇಧ ನಡೆಸಿದ್ದು, ಈಗ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಇದಕ್ಕೆ ಆರ್‌ಎಸ್‌ಎಸ್ ನಾಟಕವಾಡುತ್ತಿದೆ ಎಂದು ಟೀಕಿಸಿದರು.

ಮೊದಲ ಯುಪಿಎ ಸರ್ಕಾರಕ್ಕೆ ಸಿಪಿಐ(ಎಂ) ಬೆಂಬಲ ನೀಡಿ, ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಜಾರಿಯಾಯಿತು, ರೈತರ ಸಾಲ ಮನ್ನಾ ಮಾಡಲಾಯಿತು ಎಂದರು.

ಜನಪರ ನೀತಿಗಳನ್ನು ಜಾರಿಗೊಳಿಸಲು ಸಿಪಿಐ(ಎಂ)ನಿಂದ ಮಾತ್ರ ಸಾಧ್ಯ. ಆದ್ದರಿಂದ ಸಿಪಿಐ(ಎಂ) ಅಭ್ಯರ್ಥಿ ಕೆ.ಬಸವರಾಜು ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.