ADVERTISEMENT

ಹತ್ತು ದಿನ ಮಾತ್ರ ಕೊಬ್ಬರಿ ಖರೀದಿ!

ಆತಂಕ: ಮೊದಲ ದಿನವೇ ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:37 IST
Last Updated 6 ಸೆಪ್ಟೆಂಬರ್ 2013, 6:37 IST

ಅರಸೀಕೆರೆ: ಬೆಂಬಲ ಬೆಲೆಯಲ್ಲಿ ನ್ಯಾಫೆಡ್ ಖರೀದಿ ಕೇಂದ್ರದಲ್ಲಿ ಕೊಬ್ಬರಿ ಖರೀದಿಸುವ ಪ್ರಕ್ರಿಯೆ ಸೆ.16 ರಂದು ಕೊನೆಗೊಳ್ಳಲಿದೆ ಎಂಬ ಕಾರಣದಿಂದ ಆತಂಕಕ್ಕೆಕೊಳಗಾದ ರೈತರು ಕೊಬ್ಬರಿ ಮಾರಾಟ ಮಾಡಲು ಮುಗಿ ಬೀಳುತ್ತಿದ್ದಾರೆ. ರೈತರು ಅಪಾರ ಪ್ರಮಾಣದಲ್ಲಿ ಕೊಬ್ಬರಿ ಚೀಲದೊಂದಿಗೆ ಸುಡು ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾದು ಕುಳಿತಿದ್ದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನ್ಯಾಫೆಡ್ ಖರೀದಿ ಕೇಂದ್ರದ ಮೂಲಕ ಕಳೆದ ಒಂದೂವರೆ ತಿಂಗಳಿನಿಂದಲೂ ರೈತರಿಂದ ಖರೀದಿ ಮಾಡಲಾಗುತ್ತಿತ್ತು.

ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟೆ ಮೇಲೆ ಜಾಗ ಪಡೆಯಲು ರೈತರು ರಾತ್ರಿಯಿಂದಲೇ ವಾಹನಗಳೊಂದಿಗೆ ಸರತಿ ಸಾಲಿನಲ್ಲಿ ಕಾಯುತ್ತಿದ್ದರು ಬೆಳಿಗ್ಗೆ 10 ಗಂಟೆ ವೇಳೆಗೆ ಆಪಾರ ರೈತರು ಜಮಾಯಿಸಿದ್ದರು. ಮಧ್ಯಾಹ್ನವಾದರೂ ಬಿಸಿಲನ್ನೂ ಲೆಕ್ಕಿಸದೆ ನೂರಾರು ಮಂದಿ ರೈತರು ವಾಹನಗಳೊಂದಿಗೆ ನಿಂತಿದ್ದರು. ವಾಹನ ರಸ್ತೆ ಬದಿ ನಿಲ್ಲಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ದಾಸ್ತಾನು ಮಾಡಿರುವ ಮುಂಗಾರು ಹಂಗಾಮಿನ ಕೊಬ್ಬರಿ ಈಗ ಮಾರಾಟಕ್ಕೆ ಬಂದಿದೆ. ಇಂತಹ ವೇಳೆಯಲ್ಲಿ ನ್ಯಾಫೆಡ್ ಖರೀದಿ ಕೇಂದ್ರವನ್ನು ಸೆ.16ಕ್ಕೆ ಕೊ ಬ್ಬರಿ ಖರೀದಿ ಅಂತ್ಯಗೊಳಿಸಲು ಸರ್ಕಾರ ದಿನ ನಿಗದಿ ಪಡಿಸಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ. ಸರ್ಕಾರ ತಳೆದಿರುವ ಈ ನಿರ್ಧಾರದ ಬಗ್ಗೆ ಸ್ಥಳದಲ್ಲಿ ್ದದ್ದ ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು. ಖರೀದಿ ದಿನ ವಿಸ್ತರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದರು..

ಕೊಬ್ಬರಿ ಬೆಲೆ ಕುಸಿತದ ಹಿನ್ನಲೆ ಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಸೇರಿ ಪ್ರತಿ ಕ್ವಿಂಟಾಲ್‌ಗೆ ರೂ, 6550 ದಂತೆ ಪ್ರತಿ ರೈತರಿಂದ 10ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಸುವ ವ್ಯವಸ್ಥೆ ಮಾಡಲಾ ಗಿತ್ತು.ಕಳೆದ ಒಂದೂವರೆ ತಿಂಗಳ ಹಿಂದೆ ಆರಂಭಿಸಿದ ಖರೀದಿ ಕೇಂದ್ರ ದಲ್ಲಿ ಡಿಶಂಬರ್ ಮೊದಲ ವಾರದವರೆಗೆ ದಿನ ನಿಗದಿ ಮಾಡಿ ಕ್ರಮ ಸಂಖ್ಯೆ ನೀಡಿ ಟೋಕನ್ ವಿತರಿಸಲಾಗಿತ್ತು

ಈವರೆಗೆ ಬರದ ಬೇಗುದಿಯಲ್ಲಿ ಸಿಕ್ಕಿ ಆರ್ಥಿಕ ಸಂಕಷ್ಟದಲ್ಲಿ ನಲುಗಿರುವ ರೈತರು ಕೊಬ್ಬರಿ ಧಾರಣೆ ಕುಸಿತದಿಂದ ಕಂಗಾಲಾಗಿದ್ದರು. ಆದರೆ ರೈತರ ನೆರವಿಗೆ ನ್ಯಾ ಫೆಡ್ ಖರೀದಿ ಕೇಂದ್ರ ತೆರೆದು ನೆಮ್ಮದಿ ಮೂಡಿಸಿದ್ದ ಸರ್ಕಾರ ಮತ್ತೆ ಖರೀದಿ ಕೇಂದ್ರವನ್ನು ಮುಚ್ಚುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಲ್ಲ ಈವರೆಗೆ ಶೇಕಡ 50 ರಷ್ಟು ಅಂದರೆ ಸುಮಾರು 30 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿಸಿದ್ದು, ಇನ್ನೂ ಶೇಕಡ 50 ರಷ್ಟು ಕೊಬ್ಬರಿ ಮಾರಾಟವಾಗಬೇಕಿದೆ ಎಂದು ಹೇಳಲಾಗಿದೆ.

ಮಾರುಕಟ್ಟೆ ಪ್ರಾಂಗಣದಲ್ಲಿ ನ್ಯಾಫೆಡ್ ಕೊಬ್ಬರಿ ಖರೀದಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ್ದ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಹಾಗೂ ರುದ್ರೇಶ ಗೌಡ ಅವರು ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಸೂಕ್ತ ಧಾರಣೆ ಸಿಗುವವರೆವಿಗೂ ನ್ಯಾಫೆಡ್ ಖರೀದಿ ಕೇಂದ್ರ ಮುಚ್ಚುವುದಿಲ್ಲ ಎಂಬ ಭರವಸೆ ನೀಡಿದ್ದರು. ಆದರೆ ಈಗ ಸೆ.16ರವರೆಗೆ ಮಾತ್ರ ಕೊಬ್ಬರಿ ಖರೀದಿಸುವುದಾಗಿ ಮಾಹಿತಿ ಹೊರಬಿದ್ದಿರುವುದು ರೈತರ ತಳಮಳಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.