ADVERTISEMENT

ಹಾಸನಕ್ಕೆ ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:30 IST
Last Updated 6 ಅಕ್ಟೋಬರ್ 2012, 19:30 IST

ಹಾಸನ: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ರಾಜ್ಯಕ್ಕೆ ಬಂದಿರುವ ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಟಿ.ಎಸ್. ಜೇಕಬ್ ನೇತೃತ್ವದ ತಂಡ ಶನಿವಾರ ಎರಡು ಹೆಲಿಕಾಪ್ಟರ್‌ಗಳಲ್ಲಿ ಬೆಳಿಗ್ಗೆ 11ಗಂಟೆಗೆ ಹಾಸನದ ಬೂವನಹಳ್ಳಿಯ ಹೆಲಿಪ್ಯಾಡ್‌ನಲ್ಲಿ ಇಳಿದು ಹೇಮಾವತಿ ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ ಬರುವ ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ಪರಿಶೀಲನೆ ನಡೆಸಿ ಸಂಜೆ ಬೆಂಗಳೂರಿಗೆ ವಾಪಸಾಯಿತು.

ಜಲ ಆಯೋಗದ ನಿರ್ದೇಶಕ ಬಿ.ಪಿ. ಪಾಂಡೆ, ಕೇಂದ್ರ ಕೃಷಿ ಸಚಿವಾಲಯದ ಉಪ ಆಯುಕ್ತ ಪಿ.ಕೆ. ಷಾ, ಜಲಸಂಪನ್ಮೂಲ ಇಲಾಖೆ ಅಧಿಕಾರಿ ಡಿ. ರಂಗಾರೆಡ್ಡಿ ಅವರು ತಂಡದಲ್ಲಿದ್ದರು. ಕಾವೇರಿ ನೀರಾವರಿ ನಿಗಮದ ಎಂಡಿ ಎಂ.ಎ. ಸಾದಿಕ್ ತಂಡಕ್ಕೆ ಮಾಹಿತಿ ನೀಡಿದರು.

ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಪಟೇಲ್ ಶಿವರಾಂ, ಬಿ.ವಿ. ಕರೀಗೌಡ ಮತ್ತಿತರರು ತಂಡಕ್ಕೆ ಜಿಲ್ಲೆಯ ಸ್ಥಿತಿಗತಿ ವಿವರಿಸಿದರು. ಹೇಮಾವತಿ ಜಲಾಶಯದಲ್ಲಿರುವ ನೀರಿನ ಪ್ರಮಾಣ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇದನ್ನು ಆಶ್ರಯಿಸಿರುವ ಬೆಳೆ ಉಳಿಸಿಕೊಳ್ಳಲು ಬೇಕಾಗುವ ನೀರಿನ ಪ್ರಮಾಣ ಮುಂತಾದ ವಿವರ ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿ, ಯಳ್ಳೇಶ್ವರ, ತಟ್ಟೆ ಬೆಳಗುಲಿ ಮುಂತಾದ ಗ್ರಾಮದಲ್ಲಿ ಇಳಿದ ತಂಡದ ಸದಸ್ಯರು ಬತ್ತದ ಬೆಳೆ ವೀಕ್ಷಿಸಿದರು. ತಟ್ಟೆಬೆಳಗುಲಿಯಲ್ಲಿ  ಗದ್ದೆಗಳು ನೀರಿಲ್ಲದೆ ಒಣಗುತ್ತಿದ್ದ ದೃಶ್ಯ ಗೋಚರಿಸಿತು. ಮಾಧ್ಯಮಗಳ ಜತೆಗೆ ಮಾತನಾಡಲು ತಂಡದ ಸದಸ್ಯರು ನಿರಾಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.