ADVERTISEMENT

ಹಾಸನ ಜಿಲ್ಲೆಗೆ ಬರ ಸಿಡಿಲು

ಉದಯ ಯು.
Published 11 ಅಕ್ಟೋಬರ್ 2011, 5:05 IST
Last Updated 11 ಅಕ್ಟೋಬರ್ 2011, 5:05 IST
ಹಾಸನ ಜಿಲ್ಲೆಗೆ ಬರ ಸಿಡಿಲು
ಹಾಸನ ಜಿಲ್ಲೆಗೆ ಬರ ಸಿಡಿಲು   

ಹಾಸನ: ಹೊಲ, ತೋಟಗಳಲ್ಲಿ ಬಿಡುವಿಲ್ಲದೆ ದುಡಿಯಬೇಕಾಗಿರುವ ರೈತರು, ಯುವಕರು ಪೇಟೆ ದೇವಸ್ಥಾನದ ಕಟ್ಟೆಗಳಲ್ಲಿ ಹರಟೆ ಹೊಡೆಯುತ್ತ ಕುಳಿತಿದ್ದಾರೆ. ಕೆರೆಯಂಗಳ ಒಡೆದಿದೆ. ದನಕರುಗಳು ಬಂದು ಕೆರೆಯಲ್ಲಿ ಮೇಯುತ್ತಿವೆ.... ಹಾಸನದ ತಾಲ್ಲೂಕಿನ ದುದ್ದ ಹೋಬಳಿಯ ಚಿತ್ರವಿದು.

ಇಂಥದ್ದೇ ಚಿತ್ರಣ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಕಾಣಿಸುತ್ತಿದೆ. `1963-64ರಲ್ಲಿ ಊರಲ್ಲಿ ಭೀಕರ ಬರಗಾಲ ಬಂದಿತ್ತು. ಅದಾದ ಬಳಿಕ ಈಗ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದೆ~ ಎಂದು ವೃದ್ಧ ರೈತರು ನೆನಪಿಸಿಕೊಳ್ಳುತ್ತಿದ್ದಾರೆ.

ಮುಂಗಾರು ಆರಂಭವಾದರೆ ಧೋ ಎಂದು ಬಿಡದೆ ಮಳೆ, ಅದೇ ರೀತಿ ಮೈಕೊರೆಯುವ ಚಳಿಯೂ ಇರಬೇಕಾದ ಹಾಸನ ಜಿಲ್ಲೆಯಲ್ಲಿ ಈ ವರ್ಷ ಅವೆರಡೂ ಕಾಣಿಸುತ್ತಿಲ್ಲ. ಮಳೆ ಇಲ್ಲದೆ ಯಾವ ಕೆರೆಯೂ ತುಂಬಿಲ್ಲ.

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲೂ ಇಲ್ಲಿ ಮಳೆಯಾಗುವ ಸಂದರ್ಭಗಳಿವೆ. ಆದರೆ ಈ ವರ್ಷ ಅನೇಕ ಕಡೆ ಜೂನ್- ಜುಲೈನಲ್ಲೇ ಮಳೆಯಾಗಿಲ್ಲ. ಕಳೆದ ಕೆಲವು ದಿನಗಳಿಂದ ನೆತ್ತಿ ಸುಡುವ ಬಿಸಿಲು ಬೇರೆ.

ಮಳೆಯಾಗದೆ ಬೆಳೆ ಕೈಕೊಟ್ಟಿದ್ದರಿಂದ ಬಿಡುವಿಲ್ಲದೆ ಕೆಲಸ ಮಾಡಬೇಕಾದ ರೈತರು ಅಲ್ಲಿ-ಇಲ್ಲಿ ಅಲೆದಾಡುವಂತಾಗಿದೆ. `ಈಗ ಬಿಡಿ ಸಾರ್, ಮುಂದಿನ ದಿನಗಳು ಭೀಕರವಾಗಲಿವೆ. ಆಲೂಗೆಡ್ಡೆಯಿಂದ ಹಿಡಿದು ರಾಗಿ- ಜೋಳದವರೆಗೆ ಎಲ್ಲ ಬೆಳೆಗಳೂ ನೆಲಕಚ್ಚಿವೆ. ಮುಂದೆ ರೈತರಿಗೂ ತಿನ್ನಲೇನೂ ಸಿಗಲ್ಲ, ಜಾನುವಾರುಗಳಿಗೆ ಮೇವೂ ಇಲ್ಲ~ ಎಂದು ಹಿರಿಯ ರೈತರು ಬರಲಿರುವ ದಿನಗಳನ್ನು ಈಗಲೇ ಕಾಣುತ್ತಿದ್ದಾರೆ.

ಸುಮಾರು 400 ಎಕರೆ ವಿಸ್ತಾರದ ದುದ್ದದ ದೊಡ್ಡ ಕೆರೆಗೆ ಹೋಗಿ ನೋಡಿದರೆ ಕೆರೆ ಖಾಲಿಯಾಗಿದೆ. ಈ ಕೆರೆ ತುಂಬಿದರೆ ದುದ್ದದ ರೈತರು ಕನಿಷ್ಠ 3ವರ್ಷಗಳ ಕಾಲ ಸಮಸ್ಯೆ ಇಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಆದರೆ ಈಗ ನೋಡಿದರೆ ಕೆರೆತುಂಬ ಜಾನುವಾರುಗಳು ಮೇಯುತ್ತಿವೆ. ನೀರಿನ ಸಮಸ್ಯೆಯಿಂದ ಜನರು ಜಾನುವಾರುಗಳನ್ನು ತಂದು ಕೆರೆಗೆ ಬಿಡುತ್ತಾರೆ. ಅಲ್ಲೇ ನೀರು ಕುಡಿದು, ಕೆರೆ ಅಂಗಳದಲ್ಲಿರುವ ಹುಲ್ಲನ್ನು ಮೇಯುತ್ತವೆ.  ಈಗಾಗಲೇ ಹುಲ್ಲೂ ಖಾಲಿಯಾಗಿದೆ.

ಕೆರೆ ದಂಡೆಯಲ್ಲೇ ಇರುವ ಕೆಲವು ರೈತರು ಸೇರಿ ಕೆರೆಯೊಳಗೆ ಎರಡು ಬಾವಿಗಳನ್ನು ತೋಡಿ ಸಿಕ್ಕ ನೀರಿನಿಂದ ಒಂದಷ್ಟು ದಿನವಾದರೂ ನಮ್ಮ ಬೆಳೆಯನ್ನು ರಕ್ಷಿಸೋಣ ಎಂದು ಹೆಣಗಾಡುತ್ತಿದ್ದಾರೆ. ಮಳೆ ಹಾಗೂ ಕೆರೆಯ ನೀರನ್ನು ನಂಬಿ ಬತ್ತ ಬಿತ್ತನೆ ಮಾಡಿದವರಿಗೆ ಇನ್ನೂ ನೀರು ಬೇಕು. 15 ದಿನ ನೀರು ಬಿಟ್ಟರೆ ಕೆರೆ ಸಂಪೂರ್ಣ ಖಾಲಿಯಾಗುತ್ತದೆ. ಆ ನೀರೂ ಬೆಳೆಗೆ ಸಾಕಾಗುವುದಿಲ್ಲ. ಆದ್ದರಿಂದ ಈ ಬೆಳೆಯ ಭವಿಷ್ಯವೇನು ಎಂಬುದು ರೈತರಿಗೆ ಸ್ಪಷ್ಟವಾಗಿದೆ. ತೆಂಗಿನ ಮರಗಳಿಗೆ ಯಾವುದೋ ರೋಗ ಅಡರಿಕೊಂಡು ಗರಿಗಳು ಒಣಗುತ್ತಿವೆ. ಆಲೂಗೆಡ್ಡೆ ಸತತ ಐದನೇ ವರ್ಷವೂ ಕೈಕೊಟ್ಟಿದೆ. 15 ಮೂಟೆ ಆಲೂಗೆಡ್ಡೆ ಬಿತ್ತನೆ ಮಾಡಿದವರಿಗೆ 10 ರಿಂದ 12 ಮೂಟೆ ಬೆಳೆ ಸಿಕ್ಕಿದೆ.

ಮಾರಲು ಹೋದರೆ ಬೆಲೆಯೂ ಇಲ್ಲ. ಅನೇಕ ರೈತರು ಕೈಗೆ ಬಂದ ಬೆಳೆಯನ್ನು ಮಾರುವ ಪ್ರಯತ್ನವನ್ನೇ ಮಾಡಿಲ್ಲ. `ಈ ಬಾರಿ ಯಾವ ಬೆಳೆಯೂ ಬಂದಿಲ್ಲ. ಇನ್ನು ಮಳೆಯಾಗಿ ಕೆರೆಗೆ ನೀರುಬಂದರೆ ಜಾನುವಾರುಗಳಿಗೆ ಅನುಕೂಲವಾಗಬಹುದು. ಆದರೆ ಮತ್ತೆ ಬೆಳೆ ಬರುವುದಿಲ್ಲ ಎಂಬುದು ಖಚಿತ. ರೈತರ ಭವಿಷ್ಯ ಮಂಕಾಗಿದೆ~ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ರೈತ ನಿಂಗೇಗೌಡ ನುಡಿದಿದ್ದಾರೆ.

ಕೆರೆ ನೀರು ನಿಯಂತ್ರಿಸಿ: ತಾಲ್ಲೂಕಿನ ಕೆರೆಗಳಲ್ಲಿ ಅಷ್ಟು ಇಷ್ಟು ನೀರು ಮಾತ್ರ ಉಳಿದುಕೊಂಡಿದೆ. ಅದನ್ನು ಬೆಳೆಗೆ ಹರಿಸದೆ ಜಾನುವಾರುಗಳಿಗಾಗಿ ಉಳಿಸಲು ಕ್ರಮ ಕೈಗೊಳ್ಳಬೇಕು. ಹಾಸನ ತಾಲ್ಲೂಕನ್ನೂ ಬರಪೀಡಿತ ಎಂದು ಘೋಷಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ದುದ್ದ ಹೋಬಳಿಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಇರುವ ಒಂದು ಶಾಲೆಗೂ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ತರಿಸಬೇಕಾಗಿದೆ. ಗ್ರಾ.ಪಂ.ನವರಿಗೆ ದಿನಕ್ಕೆ ಅರ್ಧ ಗಂಟೆ ನೀರು ಕೊಡಲೂ ಆಗುತ್ತಿಲ್ಲ. ಕೊಳವೆ ಬಾವಿಯಿಂದ ಕೆಟ್ಟ ನೀರು ಬರುತ್ತಿದೆ. ಜತೆಗೆ ಕಲ್ಲುಗಳೂ ಬರುತ್ತಿವೆ. ಕುಡಿಯುವುದು ಬಿಡಿ, ಪಾತ್ರ ತೊಳೆಯಲೂ ಇದನ್ನು ಬಳಸಬೇಡಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ ಎಂದು ಶಾಲೆಯ ಶಿಕ್ಷಕರು ತಿಳಿಸಿದರು.

ಪರಿಹಾರ ನೀಡಿ: ತಾಲ್ಲೂಕಿನ ದೊಡ್ಡ ರೈತರಿಗೆ ಕನಿಷ್ಠ 50 ಸಾವಿರ ಸಣ್ಣ ರೈತರಿಗೆ 25ಸಾವಿರ ರೂಪಾಯಿ ಹಾಗೂ ಉದ್ಯೋಗವಿಲ್ಲದ ಬಡವರಿಗೆ 15 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.