ADVERTISEMENT

ಹಾಸನ-ಬೆಂಗಳೂರು ಚತುಷ್ಪಥ ರಸ್ತೆ ಡಿಸೆಂಬರ್‌ಗೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 10:05 IST
Last Updated 4 ಸೆಪ್ಟೆಂಬರ್ 2011, 10:05 IST

ಹಾಸನ: `ಬೆಂಗಳೂರು ಹಾಸನ ಚತುಷ್ಪಥ ರಸ್ತೆಯ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ~ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಡನೆ ಮಾತನಾಡುತ್ತ ಅವರು ಈ ವಿಚಾರ ತಿಳಿಸಿದರು.

`ಮುಂದೆ ಹಾಸನ ಬಿ.ಸಿ ರೋಡ್ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದ್ದು, ಇದಕ್ಕೆ ಎರಡು ಪ್ರತ್ಯೇಕ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಈಗ ಇರುವ ರಸ್ತೆಯನ್ನೇ ಅಗಲಗೊಳಿಸುವುದು ಅಥವಾ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸುರಂಗ ಮಾರ್ಗ ಮಾಡುವುದು ಇದರಲ್ಲಿ ಸೇರಿವೆ.

ಇರುವ ರಸ್ತೆ ಅಗಲಗೊಳಿಸಲು ಕಿ.ಮೀ. ಒಂದಕ್ಕೆ 10 ರಿಂದ 14 ಕೋಟಿ ರೂಪಾಯಿ ವೆಚ್ಚ ಬರುವುದಾದರೆ, ಸುರಂಗ ಮಾರ್ಗಕ್ಕೆ ಕಿ.ಮೀ. ಒಂದಕ್ಕೆ 175ಕೋಟಿ ರೂಪಾಯಿ ವೆಚ್ಚ ಬರಲಿದೆ. ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ಸದಸ್ಯರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವರು. ಈ ಯೋಜನೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಪರಿಸರ ಇಲಾಖೆಯ ಸಚಿವರು, ಅಗತ್ಯಬಿದ್ದರೆ ಪ್ರಧಾನಿಯವರನ್ನೂ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ದೇವೇಗೌಡ ತಿಳಿಸಿದರು.

ಜಿಲ್ಲೆಯ ಕಾಡಾನೆ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಇಲ್ಲಿ ರೈತರು ಮಾತ್ರವಲ್ಲ ಕಾಡು ಪ್ರಾಣಿಗಳಿಗೂ ತೊಂದರೆಯಾಗದ ರೀತಿಯಲ್ಲಿ ಯೋಜನೆ ರೂಪಿಸಬೇಕಾಗಿದೆ. ಸಮಸ್ಯೆಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ತನ್ನ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಕೈಗೆತ್ತಿಕೊಂಡಿರುವ 177 ಕಾಮಗಾರಿಗಳಲ್ಲಿ 160 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 16 ಕೋಟಿ ರೂಪಾಯಿಯಲ್ಲಿ ರೂ. 14 ಕೋಟಿ  ವೆಚ್ಚವಾಗಿದೆ. ಉಳಿದ 2 ಕೋಟಿ ರೂಪಾಯಿಯಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬಿಜೆಪಿಯ ಕೆಲವು ಮಾಜಿ ಸಚಿವರು ಜೆಡಿಎಸ್  ಸೇರ್ಪಡೆಗೆ ಸಂಬಂಧಿಸಿದಂತೆ ಹಬ್ಬಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, `ನನಗೆ ರಕ್ತದೊತ್ತಡ ಇರುವುದರಿಂದ ಕೆಲವು ದಿನಗಳಿಂದ ಟಿ.ವಿ. ನೋಡುವುದನ್ನೇ ಬಿಟ್ಟಿದ್ದೇನೆ. ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ವಿಷಯ ತಿಳಿದ ಬಳಿಕವಷ್ಟೇ ಪ್ರತಿಕ್ರಿಯೆ ನೀಡುತ್ತೇನೆ~ ಎಂದರು.

ಇದಕ್ಕೂ ಮೊದಲು ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.