ADVERTISEMENT

ಹಿಮ್ಸ್‌ಗೆ ‘ಕಾಯಕಲ್ಪ’ ಪ್ರಶಸ್ತಿ

ಸ್ವಚ್ಛ ಭಾರತ ಅಭಿಯಾನ, ₹ 50 ಲಕ್ಷ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 10:58 IST
Last Updated 29 ಮಾರ್ಚ್ 2018, 10:58 IST

ಹಾಸನ: ಉತ್ತಮ ಸೇವೆ ನೀಡುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ‘ಕಾಯಕಲ್ಪ’ ಪ್ರಶಸ್ತಿಗೆ ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಹಿಮ್ಸ್‌) ಆಯ್ಕೆಯಾಗಿದೆ.

ಕೇಂದ್ರ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯೊಂದಿಗೆ ಗುಣಮಟ್ಟದ ಹಾಗೂ ಸೋಂಕು ರಹಿತ ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಭಿಯಾನದ ಉದ್ದೇಶವಾಗಿದ್ದು, ಜಿಲ್ಲಾಸ್ಪತ್ರೆ ವಿಭಾಗದಲ್ಲಿ ಹಿಮ್ಸ್‌ಗೆ ಪ್ರಥಮ ಸ್ಥಾನ ನೀಡಿ ಪ್ರಶಸ್ತಿಯೊಂದಿಗೆ ₹ 50 ಲಕ್ಷ ನಗದು ಬಹುಮಾನವಾಗಿ ನೀಡಲಾಗುತ್ತಿದೆ ಎಂದು ಬುಧವಾರ ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳನ್ನು ಜಿಲ್ಲಾ, ತಾಲ್ಲೂಕು ಆಸ್ಪತ್ರೆ ಹಾಗೂ ಪಿಎಚ್.ಸಿ ಅಥವಾ ಸಿಎಚ್ ಸಿ ಎಂದು ಮೂರು ವಿಭಾಗ ಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗಿದೆ. ಜಿಲ್ಲಾಸ್ಪತ್ರೆ ವಿಭಾಗದಲ್ಲಿ ರಾಜ್ಯದ 36 ಆಸ್ಪತ್ರೆಗಳುಸೇರಿದ್ದು, ಒಟ್ಟು ಆರು ಮಾನದಂಡಗಳ ಬಗ್ಗೆ ಮೌಲ್ಯಮಾಪನ ನಡೆಸಿ ಪ್ರಶಸ್ತಿ ನೀಡಲಾಗುತ್ತದೆ. ಇದರಲ್ಲಿ ರಾಜ್ಯದ 18 ಆಸ್ಪತ್ರೆಗಳು ಶೇ 70 ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ಅದರಲ್ಲಿ ಹಿಮ್ಸ್ ಶೇ 99 ಅಂಕ ಪಡೆದು ಮೊದಲ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ADVERTISEMENT

ಪ್ರಶಸ್ತಿಯೊಂದಿಗೆ ಬಹುಮಾನವಾಗಿ ನೀಡಲಾಗು ತ್ತಿರುವ ₹ 50 ಲಕ್ಷದಲ್ಲಿ ಶೇ 75 ರಷ್ಟನ್ನು ಆಸ್ಪತ್ರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡು ಶೇ 25 ರಷ್ಟು ಹಣವನ್ನು ಪ್ರಶಸ್ತಿ ಲಭಿಸಲು ಶ್ರಮವಹಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು. ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳನ್ನು ಉತ್ತಮ ಗೊಳಿಸುವುದರ ಜತೆಗೆ ಮುಂದಿನ ದಿನಗಳಲ್ಲಿಯೂ ಅಗ್ರಸ್ಥಾನ ಕಾಪಾಡಿ ಕೊಳ್ಳಲು ಶ್ರಮ ವಹಿಸುವುದಾಗಿ ಹೇಳಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ 500 ಹಾಸಿಗೆಯಿಂದ 850ಕ್ಕೆ ಏರಿಸಲಾಗಿದೆ. ರಾಜ್ಯಮಟ್ಟದಲ್ಲೇ ಡಿಜಿಟಲ್ ಗ್ರಂಥಾಲಯವನ್ನು ಒಳಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 122 ಶುಶ್ರೂಷಕರು ಹಾಗೂ 18 ವೈದ್ಯರನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗಿದ್ದು, ಸುಸಜ್ಜಿತ 15 ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಆಸ್ಪತ್ರೆಯಲ್ಲಿರುವ 10 ಡಯಾಲಿಸಿಸ್ ಯಂತ್ರಗಳ ಸಂಖ್ಯೆಯನ್ನು 16ಕ್ಕೆ ಏರಿಕೆ ಮಾಡಲಾಗುವುದು. 800 ಹಾಸಿಗೆಗಳು ಇದ್ದರೂ ದಿನನಿತ್ಯ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿಯಾಗಿ 300 ಹಾಸಿಗೆಗಳ ಕಟ್ಟಡ ಕಾಮಗಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಮುಂದಿನ ವರ್ಷದಿಂದ 150ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗುವುದು. ಗರ್ಭಿಣಿಯರಿಗೆ ಪ್ರತ್ಯೇಕ ಐಸಿಯು ಘಟಕ ಸ್ಥಾಪನೆಗೆ ₹ 29 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಭಿಸಲಾಗುವುದು ಎಂದರು. ಹಿಮ್ಸ್ ಮುಖ್ಯ ಆಡಳಿತಾಧಿಕಾರಿ ಚಿದಾನಂದ, ಡಾ.ಕಷ್ಣಮೂರ್ತಿ ಇದ್ದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಸ್ತಾವ

ನಗರದ ಗಂಧದ ಕೋಠಿ ಆವರಣದಲ್ಲಿ ಹಿಮ್ಸ್‌ಗೆ ಸೇರಿರುವ 4 ಎಕರೆ ಜಾಗದಲ್ಲಿ ಸುಮಾರು ₹ 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಗಂಧದ ಕೋಠಿ ಆವರಣದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಡಾ. ಶಂಕರ್ ಹೇಳಿದರು.

**

ಜಿಲ್ಲಾಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಯಂತ್ರವನ್ನು ಸದ್ಯದಲ್ಲೇ ಅಳವಡಿಸಲಾಗುವುದು – ಡಾ.ಶಂಕರ್‌, ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.