ADVERTISEMENT

ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2011, 5:55 IST
Last Updated 30 ನವೆಂಬರ್ 2011, 5:55 IST
ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಅನಾವರಣ
ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಅನಾವರಣ   

ಚನ್ನರಾಯಪಟ್ಟಣ: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಜನಿವಾರ ಗ್ರಾಮದಲ್ಲಿ 500 ಮನೆಗಳಿಗೆ ನೀರು ಸರಬರಾಜು ಮಾಡುವ ದೃಷ್ಟಿಯಿಂದ ಹಲವು ವರ್ಷಗಳ ಹಿಂದೆ ನಿರ್ಮಿಸಿದ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಅಸ್ತಿ ಪಂಜರದಂತೆ ಗೋಚರಿಸುತ್ತಿದೆ.

ಪಟ್ಟಣದಿಂದ ಕೇವಲ 3 ಕಿ.ಮೀ. ದೂರದ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಹಾಗೂ ಡೇರಿ ಇದೆ. ಸುವರ್ಣ ಗ್ರಾಮೋದಯ ಯೋಜನೆಗೆ ಸೇರಿರುವ ಗ್ರಾಮದಲ್ಲಿ ಕೆಲಕಡೆ ಬಾಕ್ಸ್ ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಊರಿನ ಹೃದಯಭಾಗದಲ್ಲಿ ಸಮುದಾಯ ಭವನ ನಿರ್ಮಾಣ ಹಂತದಲ್ಲಿದೆ.

ಗ್ರಾಮಸ್ಥರು ಸೇರಿ ಕಾಳಿಕಾಂಬ ದೇಗುಲ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ. ಪಟ್ಟಣದ ವಿದ್ಯುತ್ ಲೈನ್ ಸಂಪರ್ಕವನ್ನು ಗ್ರಾಮಕ್ಕೆ ಕಲ್ಪಿಸಿರುವುದರಿಂದ ವಿದ್ಯುತ್ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲ. ಗ್ರಾಮದಲ್ಲಿ 160 ನಲ್ಲಿಗಳ ಸಂಪರ್ಕವಿದೆ.

ಇಷ್ಟೆಲ್ಲ ಸೌಲಭ್ಯಗಳಿವೆ ಆದರೆ ಊರು ಸುತ್ತು ಹಾಕಿದರೆ ಸಮಸ್ಯೆಗಳು ಎದ್ದು ಕಾಣುತ್ತವೆ. ಶಿಥಿಲಗೊಂಡ ನಳ, ನೀರಿನ ಟ್ಯಾಂಕ್. 8 ವರ್ಷಗಳ ಹಿಂದೆ ಈ ಟ್ಯಾಂಕ್ ಶಿಥಿಲಗೊಂಡ ಕಾರಣ ನೀರನ್ನು ಟ್ಯಾಂಕ್‌ಗೆ ಏರಿಸದೆ ಪೈಪ್ ಲೈನ್ ಮೂಲಕ ನಲ್ಲಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ನೀರನ್ನು ಟ್ಯಾಂಕ್‌ಗೆ ಏರಿಸಿದರೆ ಟ್ಯಾಂಕ್ ಕುಸಿದು ಬೀಳುವುದು ಖಚಿತ.

ಊರಿನ ಮಧ್ಯ ಭಾಗದ ಟ್ಯಾಂಕ್ ಪಕ್ಕದಲ್ಲಿ ಯಾರು ಸುಳಿದಾಡುವುದಿಲ್ಲ. ಮಾತ್ರವಲ್ಲ ದನ, ಕರುಗಳನ್ನು ಕರೆದುಕೊಂಡು ಹೋಗಲೂ ಹೆದರುತ್ತಾರೆ. ಯಾವ ಸಂದರ್ಭದಲ್ಲಿ  ಟ್ಯಾಂಕ್ ಬಿದ್ದು ಏನು ಅನಾಹುತ ಸಂಭವಿಸುತ್ತಿದೆಯೋ ಎಂಬ ಆತಂಕ ಜನರನ್ನು ಕಾಡುತ್ತಿದೆ.
 
ಹಲವು ಸಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಟ್ಯಾಂಕ್ ನೆಲಸಮ ಮಾಡುವಂತೆ ಮಾಡಿದ ಮನವಿಗೆ ಪುರಸ್ಕಾರ ದೊರೆತ್ತಿಲ್ಲ. ಬರಿ ಆಶ್ವಾಸನೆ ಸಿಕ್ಕಿದೆಯೇ ಹೊರತು ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

 ಇದಕ್ಕೆ ಪರ್ಯಾಯವಾಗಿ ಊರಿನ ಹೊರಭಾಗದಲ್ಲಿ ನೂತನವಾಗಿ ನಳನೀರು ಸರಬರಾಜು ಟ್ಯಾಂಕ್ ನಿರ್ಮಿಸಲಾಗಿದೆ. ಅದಕ್ಕೆ ಚಾಲನೆ ದೊರಕಿದಂತೆ ಕಾಣುತ್ತಿಲ್ಲ. ಟ್ಯಾಂಕ್‌ನಿಂದ ಊರಿನ ಹಳೇ ಟ್ಯಾಂಕ್ ಪಕ್ಕದ ಪೈಪ್ ಲೈನ್‌ಗಳಿಗೆ ಸಂಪರ್ಕ ಕಲ್ಪಿಸಬೇಕಿದೆ.
 
ಕೆಲವು ಕಡೆ ಪೈಪ್‌ಲೈನ್ ದುರಸ್ತಿ ಮಾಡಬೇಕಿದೆ. ಕೆಲವೆಡೆ ಬಾಕ್ಸ್ ಚರಂಡಿ ಸರಿಯಾಗಿ ನಿರ್ಮಿಸದೆ ಇರುವುದರಿಂದ ಮಳೆ ಬಂದಾಗ ಚರಂಡಿಯಲ್ಲಿ ತುಂಬಿದ ನೀರು ಮನೆಗೆ ನುಗ್ಗುತ್ತದೆ ಎಂದು ಮಹಿಳೆಯರು ದೂರುತ್ತಾರೆ.

ಸುವರ್ಣ ಗ್ರಾಮೋದಯ ಯೋಜನೆಯಡಿ ಕೆಲವು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲಾಗಿದೆ. ಆದರೆ ಗ್ರಾ.ಪಂ. ಕಚೇರಿಯಲ್ಲಿ ಶೌಚಾಲಯವಿಲ್ಲದೇ  ಪರದಾಡುವಂತಾಗಿದೆ. ಬಹಿರ್ದೆಸೆಗಾಗಿ ಪಕ್ಕದ ತೋಟವನ್ನು ಅವಲಂಬಿಸಬೇಕಿದೆ ಎನ್ನುತ್ತಾರೆ ಸಿಬ್ಬಂದಿ.


ಊರಿನ ಮುಂಭಾಗದಲ್ಲಿ ಈಗಾಗಲೇ ರಾಜೀವ್ ಗಾಂಧಿ ಮಾಹಿತಿ ಕೇಂದ್ರ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿ ಹೊಸದಾಗಿ ಗ್ರಾ.ಪಂ. ಕಚೇರಿಕಟ್ಟಡ ನಿರ್ಮಾಣ ಹಂತದಲ್ಲಿದೆ.
-ಸಿದ್ದರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT