ADVERTISEMENT

ಹೈನುಗಾರಿಕೆಯಿಂದ ಆರ್ಥಿಕ ಸಬಲತೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 9:25 IST
Last Updated 5 ಜುಲೈ 2017, 9:25 IST
ಅರಕಲಗೂಡು ತಾಲ್ಲೂಕು ದೊಡ್ಡಮಗ್ಗೆ ಗ್ರಾಮದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಎ.ಮಂಜು ರೈತರಿಗೆ ಮಣ್ಣು ಪರೀಕ್ಷೆ ಪ್ರಮಾಣಪತ್ರಗಳನ್ನು ವಿತರಣೆ ಮಾಡಿದರು
ಅರಕಲಗೂಡು ತಾಲ್ಲೂಕು ದೊಡ್ಡಮಗ್ಗೆ ಗ್ರಾಮದಲ್ಲಿ ಮಂಗಳವಾರ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವ ಎ.ಮಂಜು ರೈತರಿಗೆ ಮಣ್ಣು ಪರೀಕ್ಷೆ ಪ್ರಮಾಣಪತ್ರಗಳನ್ನು ವಿತರಣೆ ಮಾಡಿದರು   

ಅರಕಲಗೂಡು:‘ರೈತರು ಆರ್ಥಿಕವಾಗಿ ಸಬಲರಾಗಲು ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬೇಕು’ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ  ಸಚಿವ ಎ.ಮಂಜು ಮಂಗಳವಾರ ಸಲಹೆ ಮಾಡಿದರು. ಕೃಷಿ ಇಲಾಖೆ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಕೃಷಿಯ ಜೊತೆಗೆ ಹೈನುಗಾರಿಕೆ. ಕುರಿ ಸಾಕಣೆ, ಮರ ಕೃಷಿಯನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.
ಹೈನುಗಾರಿಕೆ ಹಿಂದೆ ಉಪ ಕಸುಬಾಗಿತ್ತು. ಈಗ ಹೈನುಗಾರಿಕೆ ರೈತರಿಗೆ ಮುಖ್ಯ  ಕಸುಬಾಗಿದೆ. ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಿದೆ ಎಂದರು.

‘ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ದೈನಿಕ 59 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಈಗ  ಸುಧಾರಣೆ ಕ್ರಮಗಳ ಪರಿಣಾಮ ದೈನಿಕ  77ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ.  ಬೇಡಿಕೆಗಿಂತಲೂ ಮಾಂಸ ಪೂರೈಕೆ ಕಡಿಮೆ ಇದ್ದು, ಕುರಿ ಸಾಕಣೆಗೆ ಒಲವು ತೋರಲಿ ಎಂದು ಹೇಳಿದರು.

ADVERTISEMENT

ಯೋಜನೆ ತಲುಪಿಸಿ: ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು. ವಿವಿಧ ಸವಲತ್ತುಗಳ ಕುರಿತು ತಿಳಿಸಬೇಕು. ಸವಲತ್ತು ಪಡೆದವರು ಅದರ ಲಾಭಗಳನ್ನು ತಿಳಿಸಬೇಕು ಎಂದರು.

ಕೃಷಿ ವಿಶ್ವ ವಿದ್ಯಾಲಯದ ರೋಗ ಶಾಸ್ತ್ರ ಪ್ರಾಧ್ಯಾಪಕ ಡಾ ಉಮಾಶಂಕರ್ ಅವರು, ಸಮಗ್ರ ಕೃಷಿ ಪದ್ಧತಿಗೆ ಒಲವು ತೋರಬೇಕು. ಒಂದು ಬೆಳೆ ಕೈಕೊ ಟ್ಟರೂ, ಇನ್ನೊಂದು ಕೈಹಿಡಿಯಲಿದೆ ಎಂದರು.

ಬೆಳೆಗಳಿಗೆ ಬರುವ ರೋಗ, ಕೀಟ ಬಾಧೆ ನಿರ್ವಹಣೆ ಕುರಿತು ವಿವರಿಸಿದರು. ತೋಟಗಾರಿಕಾ ವಿಸ್ತರಣಾ ಕೆಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಸ್. ಪ್ರಸಾದ್‌ ಬೆಳೆಗಳ ಕುರಿತು, ರೇಷ್ಮೆ ಇಲಾಖೆ ಅಧಿಕಾರಿ ದಳವಾಯಿ ರೇಷ್ಮೆ ಕೃಷಿ ವಿವರಿಸಿದರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ವೀಣಾ ಮಂಜುನಾಥ್, ಜಿ.ಪಂ.ಸದಸ್ಯ ಬಿ.ಎಂ.ರವಿ, ರೈತ ಸಂಘದ ಅಧ್ಯಕ್ಷ ಯೋಗಣ್ಣ, ಪ್ರಗತಿಪರ ರೈತ ಪುಟ್ಟಯ್ಯ  ಗ್ರಾ.ಪಂ.ಅಧ್ಯಕ್ಷ ರಂಗನಾಥ್ ಮಾತನಾಡಿದರು.

ತಾ.ಪಂ.ಸದಸ್ಯ ಪುಟ್ಟರಾಜ್, ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎಲ್ ಯಶ್ವಂತ್, ಗ್ರಾ.ಪಂ.ಉಪಾಧ್ಯಕ್ಷೆ ಶಾಂತಮ್ಮ, ಪ್ರಗತಿ ಪರ ರೈತ ಪ್ರಸನ್ನ ರಾಜೇಅರಸ್, ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ, ಕೃಷಿ ಅಧಿಕಾರಿಗಳಾದ ಸೋಮಶೇಖರ್‌, ಕೆ.ಟಿ.ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯ ಕ್ರಮಕ್ಕೆ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ ರಥಯಾತ್ರೆಯ ಮೆರವಣಿಗೆ ನಡೆಸಲಾಯಿತು. ವೀರಭದ್ರ ನೃತ್ಯ, ತಮಟೆ ವಾದ್ಯ ಮುಂತಾದ ಕಲಾತಂಡ ಗಳು ಮೆರವಣಿಗೆಗೆ ಮೆರಗು ನೀಡಿದವು.

20 ಸಾವಿರ  ಮೆಟ್ರಿಕ್‌  ಸಾಮರ್ಥ್ಯದ  ಗೋದಾಮ  ನಿರ್ಮಾಣ
ಅರಕಲಗೂಡು: ರೈತರು ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿ, ಉತ್ತಮ ಬೆಲೆ ಬಂದಾಗ ಮಾರಲು ಅನುವಾಗುವಂತೆ ತಾಲ್ಲೂಕಿನಲ್ಲಿ 20 ಸಾವಿರ ಮೆಟ್ರಿಕ್‌ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಲಾಗುತ್ತಿದೆ ಎಂದು ಸಚಿವ ಎ.ಮಂಜು ತಿಳಿಸಿದರು.

ಪಶು ಆಹಾರ ಘಟಕ ನಿರ್ಮಾಣ ಕಾರ್ಯ ಸಧ್ಯದಲ್ಲೆ ಆರಂಭವಾಗಲಿದೆ.  ಇದರಿಂದ ಜೋಳ ಬೆಳೆಯುವ ರೈತರಿಗೆ ಉತ್ತಮ ದರ ಸಿಗಲಿದೆ, ಸ್ಥಳೀಯವಾಗಿಯೂ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಅಭಿಪ್ರಾಯಪಟ್ಟರು.

ದಶಕದ ಹಿಂದೆ ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ  ಬಿತ್ತನೆ ಆಗುತ್ತಿತ್ತು. ಅಂಗಮಾರಿ ರೋಗ, ದೃಢೀಕೃತ ಬಿತ್ತನೆ ಬೀಜದ ಕೊರತೆ ಪರಿಣಾಮ ಈಗ 10 ರಿಂದ 15 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ  ಬೆಳೆಯಲಾಗುತ್ತಿದೆ ಎಂದು ತೋಟಗಾರಿಕಾ ವಿಸ್ತರಣಾ ಕೆಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಎಸ್. ಪ್ರಸಾದ್‌ ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಗಾರರು ಪಡೆಯುವ ಇಳುವರಿಗಿಂತ ಜಿಲ್ಲೆಯ ರೈತರು ಪಡೆಯುತ್ತಿರುವ ಇಳುವರಿ ತೀರಾ ಕಡಿಮೆ ಇದೆ. ಇದಕ್ಕೆ  ಇಲ್ಲಿನ ರೈತರು ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸದಿರುವುದು ಮುಖ್ಯ ಕಾರಣವಾಗಿದೆ. ಆಲೂ ಬೆಲೆಯಲ್ಲಿ ಬೀಜೋಪಚಾರ ಅತ್ಯಂತ ಪ್ರಮುಖ ಘಟ್ಟವಾಗಿದ್ದು ಇದನ್ನು ಅನುಸರಿಸಿದಾಗ ಹೆಚ್ಚಿನ ಇಳುವರಿ ಪಡೆಯಲು ಸಾದ್ಯ ಎಂದು ಅಭಿಪ್ರಾಯಪಟ್ಟರು.

* * 

ರೇಷ್ಮೆ ಮಾರಾಟದಲ್ಲಿ ಟೆಂಡರ್ ಪದ್ಧತಿ ಅಳವಡಿಸಿದ ಬಳಿಕ ರೈತರಿಗೆ ಉತ್ತಮ ಸಿಗುತ್ತಿದೆ. ಸಿಲ್ಕ್ ಮತ್ತು ಮಿಲ್ಕ್ ರೈತರ ಕೈಹಿಡಿಯುತ್ತಿದೆ
ಎ.ಮಂಜು
ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.