ADVERTISEMENT

ಹೊನ್ನಾಟ್ಲು: ಕಾಡುಪ್ರಾಣಿ ಕಾಟ

ಜಾನೆಕೆರೆ ಆರ್‌.ಪರಮೇಶ್‌
Published 12 ಡಿಸೆಂಬರ್ 2012, 10:31 IST
Last Updated 12 ಡಿಸೆಂಬರ್ 2012, 10:31 IST
ಬತ್ತದ ಬೆಳೆಯನ್ನು ಕಾಡು ಕೋಣಗಳು ತಿಂದು ಹಾಕಿರುವುದು.
ಬತ್ತದ ಬೆಳೆಯನ್ನು ಕಾಡು ಕೋಣಗಳು ತಿಂದು ಹಾಕಿರುವುದು.   

ಸಕಲೇಶಪುರ: ಎತ್ತ ನೋಡಿದರೂ ಕಣ್ಣಿಗೆ ಮುದ ನೀಡುವ ಹಸಿರು ಸೆರಗು ಚೆಲ್ಲಿದ ಪಶ್ಚಿಮಘಟ್ಟದ ಮಳೆ ಕಾಡುಗಳು ಹಾಗೂ ಮುಗಿಲಿಗೆ ಮುಖ ಮಾಡಿ ನಿಂತ ಬೆಟ್ಟಗಳ ಸೌಂದರ್ಯದ ನಡುವೆ ಇರುವ ಹೊನ್ನಾಟ್ಲು ಗ್ರಾಮ ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ.

ತಾಲ್ಲೂಕು ಕೇಂದ್ರದಿಂದ 52 ಕಿ.ಮೀ. ದೂರದಲ್ಲಿ ಇರುವ ಹೊನ್ನಾಟ್ಲು ಗ್ರಾಮಕ್ಕೆ ಸುಬ್ರಹ್ಮಣ್ಯ-ಸಕಲೇಶಪುರ ಮಾರ್ಗದ ಬಿಸಿಲೆ ಗ್ರಾಮದ ಮೂಲಕ ಹೋಗಬೇಕು. ಬಿಸಿಲೆ ಗ್ರಾಮದಿಂದ ಹೊನ್ನಾಟ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿ.ಮೀ. ರಸ್ತೆಯನ್ನು ರಸ್ತೆ ಎನ್ನುವುದಕ್ಕೆ ಸಾಧ್ಯವಿಲ್ಲ. ದನಕರುಗಳು ಕೂಡ ನಡೆದಾಡುವುದಕ್ಕೆ ಸಾಧ್ಯವಿಲ್ಲದಂತೆ ಕೊರಕಲು, ಗುಂಡಿ ಬಿದ್ದು ಓಣಿಯಾಗಿದ್ದು, ಹರ ಸಾಹಸದಿಂದ  ಜೀಪುಗಳು ಮಳೆಗಾಲ ಬಿಟ್ಟು ಬೇರೆ ಸಮಯದಲ್ಲಿ ಹೋಗುತ್ತವೆ.

ಕಾಡಾನೆ, ಕಾಟಿ ಹಾವಳಿ
ವರ್ಷಪೂರ್ತಿ ನೈಸರ್ಗಿಕವಾಗಿ ಹರಿಯುವ ನೀರಿನ ಸೌಲಭ್ಯ ಇರುವುದರಿಂದ ತಗ್ಗು ಪ್ರದೇಶದಲ್ಲಿ ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುವ ಅವಕಾಶವಿದೆ. ಆದರೆ ಬಂಡವಾಳ, ಶ್ರಮ ಹಾಕಿ ಬೆಳೆದ ಬತ್ತದ ಬೆಳೆ ಕಳೆದ ಮೂರು ವರ್ಷಗಳಿಂದ ಕಾಡಾನೆ ಹಾಗೂ ಕಾಡು ಕೋಣಗಳ ಪಾಲಾಗುತ್ತಿದೆ. ಇದರಿಂದ ಒಂದು ಕಾಳು ಬತ್ತವನ್ನೂ ಸಹ ಮನೆಗೆ ತರುವುದಕ್ಕೆ ಸಾಧ್ಯವಾಗದೆ ರೈತರು ಅನುಭವಿಸುತ್ತಿರುವ ನೋವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಗ್ರಾಮದ ಪ್ರಕಾಶ್ `ಪ್ರಜಾವಾಣಿ'ಗೆ ಹೇಳುತ್ತಾರೆ.

ಶತ ಶತಮಾನಗಳಿಂದ ಈ ಭಾಗದ ರೈತರ ಬದುಕಿಗೆ ಆಧಾರವಾಗಿದ್ದ ಏಲಕ್ಕಿ ಬೆಳೆ ಕಟ್ಟೆ ಹಾಗೂ ಕೊಕ್ಕೆಕಂದು ರೋಗಗಳ ಬಾಧೆಗೆ ತುತ್ತಾಗಿದೆ. ನೂರಾರು ಕೆ.ಜಿ. ಏಲಕ್ಕಿ ಬೆಳೆದು ಶ್ರೀಮಂತ ಬದುಕು ನಡೆಸುತ್ತಿದ್ದ ಕುಟುಂಬಗಳು ಈಗ ಒಂದು ಕೆ.ಜಿ. ಏಲಕ್ಕಿ ಸಹ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಭಾಗದ ಜನರ ಬದುಕು ಮೂರಾಬಟ್ಟೆಯಾಗಿದೆ.

ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿ ನಿಯಂತ್ರಿಸಲು ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಈ ಭಾಗದ ಜನರು ಕಳೆದ ಒಂದು ದಶಕದಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಮಲೆನಾಡಿಗರ ಈ ಸಮಸ್ಯೆಗೆ ಸರ್ಕಾರ ಯಾವುದೇ ರೀತಿಯಿಂದಲೂ ಸ್ಪಂದಿಸುತ್ತಿಲ್ಲ. ಪಕ್ಕದ ಕಾಡಿನಲ್ಲಿ ಜಲ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಉದ್ಯಮಿಗಳಿಗೆ ಸರ್ಕಾರ ಬೆನ್ನೆಲುಬಾಗಿದೆ. ಜಲ ವಿದ್ಯುತ್ ಯೋಜನೆಗಳಿಂದಲೇ ಕಾಡು ಪ್ರಾಣಿಗಳು ಗ್ರಾಮಕ್ಕೆ ನುಗ್ಗಿ ಬೆಳೆ, ಪ್ರಾಣ, ಆಸ್ತಿಪಾಸ್ತಿ ಹಾನಿ ಮಾಡುತ್ತಿವೆ ಎಂದು ಪ್ರಕಾಶ್ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

ನಕ್ಸಲ್ ಸಮಸ್ಯೆ: ಸರ್ಕಾರ ಈ ಗ್ರಾಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದನ್ನೇ ಬಂಡವಾಳ ಮಾಡಿಕೊಂಡು ನಕ್ಸಲರು ಗ್ರಾಮಗಳಿಗೆ ಭೇಟಿ ನೀಡಲು ಶುರುಮಾಡಿದ್ದಾರೆ. ಎರಡು ತಿಂಗಳ ಹಿಂದೆ ಗ್ರಾಮದ ಪ್ರಕಾಶ್ ಮನೆಗೆ ನಕ್ಸಲರು ಭೇಟಿ ನೀಡಿದ್ದು,  ಗ್ರಾಮ ಸಮಸ್ಯೆಯ ಸುಳಿಯಲ್ಲಿದೆ ಎಂಬುದಕ್ಕೆ ಹಿಡಿದ ಕನ್ನಡಿ. ಸರ್ಕಾರ ಸೂಕ್ತ ಪರಿಹಾರ, ಪುನರ್ ವಸತಿ ಕಲ್ಪಿಸಿದರೆ ಊರು ಬಿಟ್ಟು ಹೋಗುತ್ತೇವೆ ಎಂಬ ನಿರ್ಧಾರಕ್ಕೆ ಬಂದಿರುವ ಗ್ರಾಮಸ್ಥರ ನೋವಿನ ಧನಿ ಆಲಿಸುವ ಕೆಲಸ ಆಗಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.