ADVERTISEMENT

‘ಪಶು ವೈದ್ಯ ಕಾಲೇಜಿಗೆ ಸೌಲಭ್ಯ’

ಕುಲಪತಿ ಡಾ.ರೇಣುಕಾ ಪ್ರಸಾದ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:54 IST
Last Updated 14 ಸೆಪ್ಟೆಂಬರ್ 2013, 6:54 IST

ಹಾಸನ: ಸರ್ಕಾರದಿಂದ ಅನುದಾನ ಬಿಡುಗಡೆ ಯಾಗುತ್ತಿದ್ದಂತೆ ಆದ್ಯತೆ ಮೇರೆಗೆ ಮೂರೂ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳ ಲಾಗುವುದು ಮತ್ತು ವರ್ಷದೊಳಗೆ ಮೂರೂ ಕಾಲೇಜುಗಳಿಗೆ ವೆಟರ್ನರಿ ಕೌನ್ಸಿಲ್‌ ಆಫ್‌ ಇಂಡಿಯಾದ ಮಾನ್ಯತೆ ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ರೇಣುಕಾ ಪ್ರಸಾದ್‌ ಭರವಸೆ ನೀಡಿದರು.

ಕಾಲೇಜಿಗೆ ಮಾನ್ಯತೆ ನೀಡಲು ಬೇಕಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಶುಕ್ರವಾರ ಭೇಟಿ ಮಾಡಿ, ಅವರ ಬೇಡಿಕೆಗಳನ್ನು ಆಲಿಸಿದ ಬಳಿಕ ಪತ್ರಕರ್ತರೊಡನೆ ಅವರು ಮಾತನಾಡಿದರು.
ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯದಿಂದ ಈಗಾಗಲೇ 27 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಾಲೇಜಿಗೆ ಮಾನ್ಯತೆ ಇಲ್ಲದೆ ಇವರು ಸೇವೆ ಮಾಡುವಂತೆಯೂ ಇಲ್ಲ. ಸರ್ಕಾರಿ ಕೆಲಸಕ್ಕೂ ಅರ್ಜಿ ಸಲ್ಲಿಸುವಂತಿಲ್ಲ.

ಕಾಲೇಜಿಗೆ ವಿಸಿಐ ಮಾನ್ಯತೆ ನೀಡದಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಪ್ರವೇಶವನ್ನೂ ನೀಡಿಲ್ಲ. ಇದರಿಂದಾಗಿ ಆತಂಕಗೊಂಡಿರುವ 180 ವಿದ್ಯಾರ್ಥಿಗಳು ಹತ್ತು ದಿನಗಳಿಂದ ಕಾಲೇಜಿನ ಆವರಣ ದಲ್ಲಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಬಂದ ಕುಲಪತಿ, ವಿದ್ಯಾರ್ಥಿಗಳಿಗೆ ಕೆಲವು ಭರವಸೆಗಳನ್ನು ನೀಡಿ ಪ್ರತಿಭಟನೆ ಕೊನೆಗೊಳಿಸುವಂತೆ ಮನವಿ ಮಾಡಿದರು.

ಹೊಸದಾಗಿ ಆರಂಭವಾದ ಮೂರು ಕಾಲೇಜುಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಇದೆ. ಅದರ ನಿವಾರಣೆಗೆ  ತಾತ್ಕಾಲಿಕವಾಗಿ ಕೆಲವು ಕ್ರಮ ಕೈಗೊಂಡಿದ್ದೇವೆ. ಸಿಬ್ಬಂದಿಯನ್ನು ನೇಮಕ ಮಾಡುವ ಅಧಿಕಾರ ನಮಗೆ ಇಲ್ಲ. ಸರ್ಕಾರವೇ ಮಾಡಬೇಕು.

ಹಣ ಬಿಡುಗಡೆಯಲ್ಲಿ ವಿಳಂಬವಾಗಿರುವುದರಿಂದ ಸೌಲಭ್ಯಗಳು ಸ್ವಲ್ಪ ತಡವಾಗಿ ಬಂದಿವೆ. ಹೊಸ ಸಂಸ್ಥೆ ಆರಂಭಿಸುವಾಗ ಇಂಥ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಅದಕ್ಕೆ ವಿದ್ಯಾರ್ಥಿಗಳು ಆತಂಕಪ ಡಬೇಕಾಗಿಲ್ಲ. ಈಗಾಗಲೇ ತೇರ್ಗಡೆಯಾದವರಿಗೂ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸರ್ಕಾರ ತೀರ್ಮಾನಗಳನ್ನು ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ರೇಣುಕಾ ಪ್ರಸಾದ್‌ ತಿಳಿಸಿದರು.

ಕಾಲೇಜಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ತೀಮಾರ್ನಗಳನ್ನು ಕೈಗೊಳ್ಳಲು ಶೀಘ್ರದಲ್ಲೇ ಒಂದು ಸಮಿತಿ ರಚಿಸುವುದಾಗಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.