ADVERTISEMENT

11ನೇ ಸ್ಥಾನಕ್ಕೆ ಕುಸಿದ ಹಾಸನ

ದ್ವಿತೀಯ ಪಿಯು: ಶೇಕಡಾ 70.18 ಫಲಿತಾಂಶ, ಕಳೆದ ಬಾರಿ ಆರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:31 IST
Last Updated 14 ಜುಲೈ 2020, 15:31 IST
ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಹಾಸನದ ಮಾಸ್ಟರ್‌ ಪದವಿ ಪೂರ್ವ ಕಾಲೇಜಿನ ಟಿ.ಡಿ.ಹಂಸ ಅವರಿಗೆ ತಂದೆ, ತಾಯಿ ಸಿಹಿ ತಿನಿಸಿದರು.
ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ ಹಾಸನದ ಮಾಸ್ಟರ್‌ ಪದವಿ ಪೂರ್ವ ಕಾಲೇಜಿನ ಟಿ.ಡಿ.ಹಂಸ ಅವರಿಗೆ ತಂದೆ, ತಾಯಿ ಸಿಹಿ ತಿನಿಸಿದರು.   

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 70.18 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆ 11ನೇ ಸ್ಥಾನ ಪಡೆದಿದೆ. ಕಳೆದ ಬಾರಿ ಶೇಕಡಾ 75.19 ಫಲಿತಾಂಶದೊಂದಿಗೆ ಆರನೇ ಸ್ಥಾನ ಪಡೆದಿತ್ತು.

ಕನ್ನಡ ಮಾಧ್ಯಮದಲ್ಲಿ ಶೇಕಡಾ 51.86 ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಶೇಕಡಾ 79.2ರಷ್ಟು ಫಲಿತಾಂಶ ಸಿಕ್ಕಿದೆ.
ಬಾಲಕರು ಶೇಕಡಾ 59.07 ರಷ್ಟು ಫಲಿತಾಂಶ ಪಡೆದರೆ, ಬಾಲಕಿಯರು ಶೇಕಡಾ 69.53 ಫಲಿತಾಂಶದೊಂದಿಗೆ ಮೇಲುಗೈ ಸಾಧಿಸಿದ್ದಾರೆ.

ನಗರದ ಮಾಸ್ಟರ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಟಿ.ಡಿ. ಹಂಸ ಹಾಗೂ ಹಾಸನದ ಬ್ರಿಗೇಡ್‌ ಪದವಿ ಪೂರ್ವ ಕಾಲೇಜಿನ ಮೇದಿನಿ ವಿಜ್ಞಾನ ವಿಭಾಗದಲ್ಲಿ ತಲಾ 592 ಅಂಕ ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ನೀತಾ 591 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ಹಂಸ ಅವರು ಕನ್ನಡ 98, ಇಂಗ್ಲಿಷ್‌ 95, ಭೌತವಿಜ್ಞಾನ 100, ರಸಾಯನ ವಿಜ್ಞಾನ, 99, ಗಣಿತ 100, ಜೀವವಿಜ್ಞಾನ 100 ಅಂಕ ಗಳಿಸಿದರೆ, ಮೇದಿನಿ ಅವರು ಕನ್ನಡದಲ್ಲಿ 100, ಇಂಗ್ಲಿಷ್‌ 93, ಭೌತವಿಜ್ಞಾನ 100, ರಸಾಯನ ವಿಜ್ಞಾನ 100, ಗಣಿತ 99, ಜೀವವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ.ನೀತಾ ಅವರು ಕನ್ನಡ 97, ಇಂಗ್ಲಿಷ್‌ 95, ಭೌತವಿಜ್ಞಾನ 100, ರಸಾಯನ ವಿಜ್ಞಾನ 100, ಗಣಿತ 100 ಹಾಗೂ ಜೀವವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದ 14766 ವಿದ್ಯಾರ್ಥಿಗಳ ಪೈಕಿ 10,363 (ಶೇಕಡಾ 70.18) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 3997 ವಿದ್ಯಾರ್ಥಿಗಳ ಪೈಕಿ 1886 (ಶೇಕಡಾ 47.19) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 6007 ವಿದ್ಯಾಥಿಗಳ ಪೈಕಿ 4340 (ಶೇಕಡಾ 72.25), ವಿಜ್ಞಾನ ವಿಭಾಗದಲ್ಲಿ 4762 ವಿದ್ಯಾರ್ಥಿಗಳ ಪೈಕಿ 4137 (ಶೇಕಡಾ 86.88) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ತಿಳಿಸಿದರು.

ವಾಣಿಜ್ಯ ವಿಭಾಗದಲ್ಲಿ ಹಾಸನ ನಗರದ ಸೆಂಟ್ರಲ್‌ ಕಾಮರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್‌.ಜಿ. ಅನುಷಾ 590 (ಶೇಕಡಾ 98.33) ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಲೆಕ್ಕ ಪರಿಶೋಧಕರಾಗುವ ಗುರಿ ಇಟ್ಟುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ನಗರದ ಸಂತ ಫಿಲೋಮಿನಾ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೃತಿ ಭಟ್‌ 575 (ಶೇ. 95.83) ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡ 94, ಇಂಗ್ಲಿಷ್‌ 96, ಇತಿಹಾಸ 97, ಅರ್ಥಶಾಸ್ತ್ರ 98, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರದಲ್ಲಿ 92 ಅಂಕ ಗಳಿಸಿದ್ದಾರೆ. ಕಾನೂನು ವಿಭಾಗದಲ್ಲಿ ಉನ್ನತ ಶಿಕ್ಷಣ ಮಾಡುವ ಗುರಿ ಹೊಂದಿದ್ದಾರೆ.

ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿ ಸಿಹಿ ತಿನ್ನಿಸಿದರು.

ಯಸಳೂರು ಕಾಲೇಜಿಗೆ ಉತ್ತಮ ಫಲಿತಾಂಶ

ಹಾಸನ: ಸಕಲೇಶಪುರ ತಾಲ್ಲೂಕಿನ ಯಸಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ 24 ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾ 95.83 ರಷ್ಟು ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ವಿ. ಮೋಹನ್ ತಿಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದ್ದು, ಸೈಯದ್‌ ರುಕಸಾರ್‌ ತಾಜ್‌ ಫಾತಿಮಾ 557, ಎಂ.ಡಿ. ಪ್ರೇಕ್ಷಾ 556, ಬಿ.ಆರ್‌. ಲಾವಣ್ಯ 521 ಹಾಗೂ ವೈ.ಕೆ. ಪ್ರಜ್ವಲ್‌ 515 ಅಂಕ ಗಳಿಸಿದ್ದಾರೆ.

ಕಲಾ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮೂವರು ಪ್ರಥಮ, ಇಬ್ಬರು ದ್ವಿತೀಯ ಹಾಗೂ ಮೂವರು ತೃತಿಯ ಸ್ಥಾನ ಪಡೆದಿದ್ದು, ಐ.ಜಿ. ಪ್ರಕೃತಿ 504 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.