ADVERTISEMENT

ಗೊರೂರು ಸಮಾಜ ಸುಧಾರಕ: ಶಿವೇಶ್‌

ಗೊರೂರು ರಾಮಸ್ವಾಮಿ ಅಯ್ಯಂಗಾರ್ 121 ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:01 IST
Last Updated 11 ಜುಲೈ 2025, 6:01 IST
ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ (ಸ್ವಾಯತ್ತ) ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊರೂರು ಶಿವೇಶ್‌ ಅವರನ್ನು ಗೌರವಿಸಲಾಯಿತು
ಹಾಸನದ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ (ಸ್ವಾಯತ್ತ) ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊರೂರು ಶಿವೇಶ್‌ ಅವರನ್ನು ಗೌರವಿಸಲಾಯಿತು   

ಹಾಸನ: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತಿಯಷ್ಟೇ ಅಲ್ಲ, ಅವರೊಬ್ಬ ಸಮಾಜ ಸುಧಾರಕ ಎಂದು ಸಾಹಿತಿ ಗೊರೂರು ಶಿವೇಶ್ ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ (ಸ್ವಾಯತ್ತ) ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 121ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಸ್ವಾಮಿ ಅಯ್ಯಂಗಾರ್ ಅವರು ಒಬ್ಬ ಗಾಂಧಿವಾದಿಯಾಗಿದ್ದರು. ಮಹಾತ್ಮ ಗಾಂಧೀಜಿಯವರ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಗ್ರಾಮಗಳ ಅಭಿವೃದ್ಧಿಯ ಕನಸು ಹೊತ್ತು ಸ್ವಗ್ರಾಮದಲ್ಲಿ ನೆಲೆಸಿ, ಅದಕ್ಕಾಗಿ ಜೀವನ ಮುಡಿಪಾಗಿಟ್ಟರು ಎಂದರು.

ADVERTISEMENT

ಸಾಹಿತಿಯಾಗಿ, ಸಮಾಜ ಸುಧಾರಕರಾಗಿ, ರಾಜಕಾರಣಿಯಾಗಿ ಅವರದ್ದು ಆದರ್ಶ ಬದುಕು. ಸ್ವಾತಂತ್ರ್ಯ ಹೋರಾಟ, ಮೈಸೂರು ಪ್ರಜಾಸತ್ತಾತ್ಮಕ ಸರ್ಕಾರಕ್ಕಾಗಿ ಹೋರಾಟ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅವರು ಮುಂಚೂಣಿಯ ಹೋರಾಟಗಾರರಾಗಿದ್ದರು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಇರ್ಷಾದ್ ಮಾತನಾಡಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಕೃಷಿಯಲ್ಲಿ ಸಾಮರಸ್ಯಯುತವಾದ ಒಂದು ಸಮಷ್ಠಿಯ ಚಿತ್ರವನ್ನು ಮೂಡಿಸಿದ್ದಾರೆ. ಗ್ರಾಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಉತ್ಸವಗಳು, ಹಬ್ಬ ಹರಿದಿನಗಳು, ಜನಪದ ಕಲೆಗಳು, ಜನತೆಯಲ್ಲಿ ರೂಢವಾಗಿರುವ ಆಚಾರ ವಿಚಾರ, ನಂಬಿಕೆ ನಡಾವಳಿಗಳು ಎಲ್ಲವನ್ನೂ ಯಥಾವತ್ತಾಗಿ, ಸಜೀವವಾಗಿ ಸೆರೆ ಹಿಡಿದಿದ್ದಾರೆ ಎಂದರು.

ಗೊರೂರ ಅವರ ಕೃತಿಗಳಲ್ಲಿ ಗ್ರಾಮೀಣ ಸಂಸ್ಕೃತಿಯ ವಿಶ್ವರೂಪವನ್ನೇ ಕಾಣಬಹುದು. ಹಾಸ್ಯ ಮನೋಧರ್ಮದ ವ್ಯಕ್ತಿತ್ವದ ಅವರು, ಅದನ್ನು ಸಾಹಿತ್ಯದೊಳಗೆ ಬೆರೆಸಿದ ರೀತಿ ಓದುಗರನ್ನು ಪ್ರೇರೇಪಿಸುತ್ತದೆ. ಅವರ ಸಾಹಿತ್ಯ ಹಳ್ಳಿಗಳ ಬದುಕಿನ ಕಡೆಗೆ ಹೆಚ್ಚೆಚ್ಚು ಚಿತ್ರಿತ ಆಗುವುದರೊಂದಿಗೆ, ಅಸಮಾನತೆ ತೊಡೆಯಬೇಕೆಂಬ ಮೂಲ ಮಂತ್ರವನ್ನು ಸಾರುತ್ತಿತ್ತು ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ, ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯ ಪ್ರಕಾಶ್ ಮೇಗಲಕೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಮಮತೇಶ್, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಆರ್.ಬಿ. ಶಂಕರ್, ಸಂಘ– ಸಂಸ್ಥೆಗಳ ಪ್ರತಿನಿಧಿ ನಂದನ್, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಕೆ.ವಿ. ಪಾರ್ಥೆಶ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.