ಅರಕಲಗೂಡು: ‘ಹಾಸನ ಜಿಲ್ಲೆಯ ಅವಿವಾಹಿತರಲ್ಲಿ ಎಚ್ಐವಿ ಖಚಿತ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಆತಂಕದ ಸಂಗತಿ. ಜಿಲ್ಲೆ ಎಚ್ಐವಿ ಸೊಂಕಿತರಲ್ಲಿ ಜಿಲ್ಲೆ 10ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 12,494, ತಾಲ್ಲೂಕಿನಲ್ಲಿ 350 ಸೊಂಕಿತರಿದ್ದಾರೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ ಶಿರೂರ್ ಮಾಹಿತಿ ನೀಡಿದ್ದಾರೆ.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ವಿಭಾಗ ಹಾಗೂ ಹೆಬ್ಬಾಲೆ ಗ್ರಾಮ ಪಂಚಾಯಿತಿ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ತಾಲ್ಲೂಕಿನ ಗಂಗನಾಳು ಗ್ರಾಮದಲ್ಲಿ ಶನಿವಾರ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಹೈರಿಸ್ಕ್ ಇರುವಂತಹ 100 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಎಚ್ಐವಿ ತಪಾಸಣೆ ಮಾಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತಿದೆ’ ಎಂದರು.
ಎನ್‌ಎಸ್‌ಡಿ ವಿಭಾಗದ ಆಪ್ತಸಮಾಲೋಚಕ ಉಮೇಶ್ ಅಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
75 ಜನರಿಗೆ ಮಧುಮೇಹ, ಅಧಿಕ ರಕ್ತದ ಒತ್ತಡ, ಎಚ್ಐವಿ ಹಾಗೂ ಕ್ಷಯ ರೋಗ ಪರೀಕ್ಷೆ ನಡೆಸಲಾಯಿತು. ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್, ಪಿಡಿಒ ಅರುಣಕುಮಾರ್, ಕಾರ್ಯದರ್ಶಿ ಗೋಪಾಲ್, ಆರೋಗ್ಯ ಸಂರಕ್ಷಣಾಧಿಕಾರಿ ಸರೋಜ, ಪ್ರಯೋಗಶಾಲಾ ತಂತ್ರಜ್ಞೆ ಗೌರಮ್ಮ ಶುಶ್ರೂಷಕರಾದ ಲಲಿತಾ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲ್ಲೂಕು ಮೇಲ್ವಿಚಾರಕ ಶೇಖರೇಗೌಡ, ಕ್ಷೇತ್ರಕಾರ್ಯಕರ್ತ ಚಂದ್ರಶೇಖರ್, ಅಂಗನವಾಡಿ ಕಾರ್ಯಕರ್ತೆ ಆಶಾ, ಸಹಾಯಕಿ ಪ್ರೇಮಾ, ಆಶಾ ಕಾರ್ಯಕರ್ತರಾದ ರೇಣುಕಾ, ವನಜಾಕ್ಷಿ, ಗಂಗೆ ಶಿಬಿರದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.