ADVERTISEMENT

ವ್ಹೀಲಿ ವಿರುದ್ಧ ಕಾರ್ಯಾಚರಣೆ: 9 ಪ್ರಕರಣ ದಾಖಲು, 13 ಜನರು ವಶಕ್ಕೆ

ವೀಲಿಂಗ್ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಸ್ಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2023, 14:50 IST
Last Updated 7 ಜುಲೈ 2023, 14:50 IST
ವ್ಹೀಲಿ ಮಾಡುತ್ತಿರುವ ಯುವಕರು
ವ್ಹೀಲಿ ಮಾಡುತ್ತಿರುವ ಯುವಕರು    

ಹಾಸನ: ನಗರದಲ್ಲಿ ವ್ಹೀಲಿ ಪುಂಡರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಬಳಿಕ 9 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, 13 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಗರದ ಸಹ್ಯಾದ್ರಿ ಥಿಯೇಟರ್ ಮುಂಭಾಗ ಬೈಕ್ ವ್ಹೀಲಿ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ, ಇಬ್ಬರು ಯುವತಿಯರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಆ ಘಟನೆ ನಂತರ ಭಾರತೀಯ ದಂಡ ಸಂಹಿತೆ 308 ರ ಅಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಪೊಲೀಸರು ವಶಕ್ಕೆ ಪಡೆದಿರುವ ಬೈಕ್‌ಗಳು ಹಾಗೂ ಸೈಲೆನ್ಸರ್‌ಗಳು

ನಂತರ ಡಿವೈಎಸ್ಪಿ ಉದಯಭಾಸ್ಕರ್ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ದಾಳಿ ನಡೆಸಿದ್ದು, ಅನಧಿಕೃತವಾಗಿ ವಾಹನಗಳಿಗೆ ಬಿಡಿ ಭಾಗಗಳನ್ನು ಮಾರಾಟ ಮಾಡಿದ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆಧುನಿಕರಿಸಿದ 15 ಸೈಲೆನ್ಸರ್ ಹಾಗೂ ಕರ್ಕಶ ಧ್ವನಿ ಮಾಡುವ 27 ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ADVERTISEMENT

ಕ್ರಿಮಿನಲ್ ಮೊಕದ್ದಮೆ: ಇದುವರೆಗೆ ಹಾಸನ ನಗರದಲ್ಲಿ ವ್ಹೀಲಿ ಮಾಡಲು ಬಳಸುತ್ತಿದ್ದ ಸುಮಾರು 30 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದು, ಕೆಲ ಪ್ರಕರಣಗಳನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ವ್ಹೀಲಿ ಮಾಡುತ್ತಿರುವ ವಿಡಿಯೊಗಳನ್ನು ಪೋಸ್ಟ್ ಮಾಡಿದ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಇವರ ಪೋಷಕರನ್ನು ಕರೆದು ಎಚ್ಚರಿಕೆ ನೀಡಲಾಗಿದ್ದು, ಮುಂದೆ ಯಾವುದೇ ಬೈಕ್ ವ್ಹೀಲಿ ಮಾಡುವಾಗ ಸಿಕ್ಕಿ ಬಿದ್ದರೆ ಕ್ರಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹರಿರಾಂ ಶಂಕರ್‌ ಎಚ್ಚರಿಕೆ ನೀಡಿದರು.

ವ್ಹೀಲಿ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ದೃಶ್ಯಗಳು ಕಂಡು ಬಂದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಮೊ.ಸಂ. 9480804701)  ಸಂಚಾರ ಇನ್‌ಸ್ಪೆಕ್ಟರ್ (9480804749) ಮತ್ತು ಕಂಟ್ರೋಲ್ ರೂಂ (08172-268845) ಗೆ ಮಾಹಿತಿ ನೀಡಬಹುದು ಎಂದು ಹೇಳಿದರು.

ಮಾಸ್ತಿಗೌಡ ಕೊಲೆ: ನಾಲ್ವರ ವಿರುದ್ಧ ಪ್ರಕರಣ

ಜುಲೈ 4ರಂದು ಮಧ್ಯಾಹ್ನ ಚನ್ನರಾಯಪಟ್ಟಣದ ಬಸ್ ನಿಲ್ದಾಣದ ಸಮೀಪ ನಡೆದ ರೌಡಿಶೀಟರ್‌ ಮಾಸ್ತಿಗೌಡ ಕೊಲೆ ಪ್ರಕರಣ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದರು. ಪ್ರಕರಣ ಸಂಬಂಧ ಮಾಸ್ತಿಗೌಡ ಅವರ ಸಹೋದರಿ ಪಂಕಜಾ ನೀಡಿದ ದೂರಿನ ಅನ್ವಯ ಚೇತು ಶಿವು ಸಾಲಿಗಾಮೆಯ ರಾಕೇಶ್ ಹಾಗೂ ಯಾಚನಹಳ್ಳಿ ಚೇತನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು. ನುಗ್ಗೇಹಳ್ಳಿಯ ಮಾಸ್ತಿಗೌಡ ಹಾಗೂ ಚೇತನ್ ನಡುವೆ ಹಳೆ ವೈಷಮ್ಯ ಬೆಳೆದು ಎರಡು ತಂಡಗಳ ನಡುವೆ ನಡೆದ ಮನಸ್ತಾಪದ ಹಿನ್ನೆಲೆಯಲ್ಲಿ ಮಾಸ್ತಿ ಗೌಡ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. 2020 ರಿಂದಲೂ ಎರಡು ಗುಂಪಿನ ನಡುವೆ ದ್ವೇಶ ಏರ್ಪಟ್ಟಿದ್ದು ಈಗಾಗಲೇ ಜೈಲು ಸೇರಿರುವ ಯಾಚನಹಳ್ಳಿ ಚೇತನ್ ಜೈಲಿನಲ್ಲಿ ಇದ್ದುಕೊಂಡು ಮಾಸ್ತಿಗೌಡ ಕೊಲೆಗೆ ಸಂಚು ರೂಪಿಸಿದ್ದ ಎಂಬುದು ಬಹಿರಂಗವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.