ADVERTISEMENT

14ರಿಂದ ಹಾಸನ–ಸೊಲ್ಲಾಪುರ ರೈಲು

ಮಂತ್ರಾಲಯ, ರಾಯಚೂರಿಗೆ ನಿತ್ಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 11:34 IST
Last Updated 12 ಜೂನ್ 2018, 11:34 IST
ಹಾಸನ ರೈಲ್ವೆ ಜಂಕ್ಷನ್‌
ಹಾಸನ ರೈಲ್ವೆ ಜಂಕ್ಷನ್‌   

ಹಾಸನ: ಮಹಾರಾಷ್ಟ್ರದ ಸೊಲ್ಲಾಪುರ ದಿಂದ ಯಶವಂತಪುರದವರೆಗೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್‌ ಎಕ್ಸ್ ಪ್ರೆಸ್‌ ರೈಲು ಸಂಚಾರವನ್ನು ಹಾಸನದವರೆಗೆ ವಿಸ್ತರಿಸಲಾಗಿದೆ. ಜೂನ್ 14ರಿಂದ ಪ್ರತಿದಿನ ಮಂತ್ರಾಲಯ ಮಾರ್ಗವಾಗಿ ಹೊಸ ರೈಲು ಸಂಚಾರ ಆರಂಭವಾಗಲಿದೆ.

ಪ್ರತಿದಿನ ಸಂಜೆ 7.20ಕ್ಕೆ ಸೊಲ್ಲಾಪುರದಿಂದ ಹೊರಡುವ ಸೂಪರ್ ಫಾಸ್ಟ್‌ ರೈಲು ಯಶವಂತಪುರಕ್ಕೆ ಮರುದಿನ ಬೆಳಿಗ್ಗೆ 7.10ಕ್ಕೆ ಬರಲಿದೆ. ಯಶವಂತಪುರದಿಂದ ಹಾಸನ ಕಡೆಗೆ 7.40ಕ್ಕೆ ಹೊರಡಲಿರುವ ರೈಲು ಚಿಕ್ಕ ಬಾಣಾವರ, ನೆಲಮಂಗಲ, ಸೋಲೂರು, ತಿಪ್ಪಸಂದ್ರ ಮಾರ್ಗ ಕುಣಿಗಲ್‌ಗೆ ಬೆಳಿಗ್ಗೆ 8.49ಕ್ಕೆ ಬರಲಿದೆ.

ಅಲ್ಲಿಂದ 8.50ಕ್ಕೆ ಹೊರಟು 9.05ಕ್ಕೆ ಎಡೆಯೂರು, 9.19ಕ್ಕೆ ಬಿ.ಜಿ.ನಗರ, 9.58ಕ್ಕೆ ಶ್ರವಣಬೆಳಗೊಳ, 11.25ಕ್ಕೆ ಹಾಸನ ನಿಲ್ದಾಣ ಸೇರಲಿದೆ. ಚಿಕ್ಕಬಾಣಾವರ, ನೆಲಮಂಗಲ, ಹಿರಿಸಾವೆ ಮತ್ತು ಚನ್ನರಾಯಪಟ್ಟಣದಲ್ಲಿ ಈ ರೈಲು ನಿಲುಗಡೆ ನೀಡುವುದಿಲ್ಲ.

ADVERTISEMENT

ಹಾಸನ ನಿಲ್ದಾಣದಿಂದ ಸಂಜೆ 4.10ಕ್ಕೆ ಯಶವಂತಪುರದತ್ತ ಹೊರಡುವ ರೈಲು ಶ್ರವಣಬೆಳಗೊಳ ನಿಲ್ದಾಣಕ್ಕೆ 5 ಗಂಟೆಗೆ. ಬಿ.ಜಿ. ನಗರಕ್ಕೆ 5.40, ಎಡೆಯೂರಿಗೆ 6, ಕುಣಿಗಲ್‌ಗೆ 6.17, ಯಶವಂತಪುರಕ್ಕೆ ರಾತ್ರಿ 8.10ಕ್ಕೆ ತಲುಪಲಿದೆ. 8.50ಕ್ಕೆ ಅಲ್ಲಿಂದ ಹೊರಟು ಮರುದಿನ ಬೆಳಗ್ಗೆ 8.40ಕ್ಕೆ ಸೊಲ್ಲಾಪುರ ತಲುಪುತ್ತದೆ.

830 ಕಿ.ಮೀ, 16 ಗಂಟೆ ಪ್ರಯಾಣ; ಹಾಸನ– ಸೊಲ್ಲಾಪುರ 830 ಕಿ.ಮೀ. ದೂರವನ್ನು 16 ಗಂಟೆ 5 ನಿಮಿಷದಲ್ಲಿ ಕ್ರಮಿಸಲಿದೆ. ಗರಿಷ್ಠ 83 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಸರಾಸರಿ 52 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.
ಈ ಮೊದಲು 22133/ 22134 ಸಂಖ್ಯೆ ಹೊಂದಿದ್ದ ಸೂಪರ್‌ ಫಾಸ್ಟ್‌ ರೈಲಿನ ಸಂಖ್ಯೆ ಬದಲಿಸಲಾಗಿದ್ದು, ಇನ್ನು ಮುಂದೆ ಹೊಸದಾದ 11311/ 11312 ಸಂಖ್ಯೆ ಹೊಂದಲಿದೆ.

ಒಟ್ಟು 24 ಬೋಗಿಗಳಿರುವ ಈ ರೈಲು ಯಶವಂತಪುರದಿಂದ ಯಲಹಂಕ, ದೊಡ್ಡಬಳ್ಳಾಪುರ, ಗೌರಿ ಬಿದನೂರು, ಹಿಂದೂಪುರ, ಧರ್ಮಾವರಂ, ಗುಂತಕಲ್‌, ಮಂತ್ರಾಲಯ, ರಾಯಚೂರು, ಕರ್ಬುರ್ಗಿ ಮಾರ್ಗವಾಗಿ ಸೊಲ್ಲಾಪುರ ತಲುಪಲಿದೆ.

ಹಾಸನದಿಂದ ಯಶವಂತಪುರಕ್ಕೆ ₹ 70; ಸೊಲ್ಲಾಪುರ–ಹಾಸನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹಾಸನ–ಯಶವಂತಪುರ ನಡುವಿನ ಪ್ರಯಾಣಕ್ಕೆ ₹ 70 ಟಿಕೆಟ್ ದರ ನಿಗದಿಯಾಗಿದೆ. ನಾನ್‌ ಸ್ಟಾಪ್‌ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ₹ 190 ಆಗಿದ್ದು, ಅದಕ್ಕೆ ಹೋಲಿಸಿದರೆ ಟಿಕೆಟ್‌ದರ ಭಾರಿ ಅಗ್ಗವಾಗಿದೆ.

ಮಂತ್ರಾಲಯ ಪ್ರಯಾಣಿಕರಿಗೆ ಅನುಕೂಲ; ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಹೋಗುವ ಜಿಲ್ಲೆಯ ಪ್ರಯಾಣಿಕರಿಗೆ ಹೊಸ ರೈಲಿನ ಸಂಚಾರದಿಂದ ಬಹಳ ಅನುಕೂಲವಾಗಲಿದೆ. ಅಲ್ಲದೆ, ರಾಯಚೂರು, ಕಲ್ಬುರ್ಗಿ ಜಿಲ್ಲೆಗಳಿಗೆ ಪ್ರವಾಸ ಹೋಗುವವರಿಗೆ ಎಲ್ಲಿಯೂ ರೈಲು ಬದಲಿಸುವ ಅಗತ್ಯವಿಲ್ಲ.

ಬೆಂಗಳೂರು–ಹಾಸನ ಮಾರ್ಗ; ಒಟ್ಟು 5 ರೈಲು

ಹಾಸನ–ಶ್ರವಣಬೆಳಗೊಳ–ಯಶವಂತಪುರ ನೇರ ರೈಲು ಮಾರ್ಗದಲ್ಲಿ ಪ್ರತಿದಿನ 5 ರೈಲುಗಳು ಸಂಚರಿಸುತ್ತಿವೆ. ಹಾಸನ ನಿಲ್ದಾಣದಿಂದ ಬೆಳಿಗ್ಗೆ 6.10ಕ್ಕೆ ಇಂಟರ್‌ ಸಿಟಿ ಎಕ್ಸ್‌ಪ್ರೆಸ್‌, 11.20ಕ್ಕೆ ಮೈಸೂರು – ಹಾಸನ – ಶ್ರವಣಬೆಳಗೊಳ – ಯಶವಂತಪುರ ಪ್ಯಾಸೆಂಜರ್‌, ಮಧ್ಯಾಹ್ನ 4.10ಕ್ಕೆ ಸೊಲ್ಲಾಪುರ ಎಕ್ಸ್‌ಪ್ರೆಸ್‌, 4.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಬರುವ ಗೊಮ್ಮಟೇಶ್ವರ ಎಕ್ಸ್ ಪ್ರೆಸ್‌, ವಾರದಲ್ಲಿ ನಾಲ್ಕು ದಿನ ಮಂಗಳೂರು–ಬೆಂಗಳೂರು ನಡುವೆ ಸಂಚರಿಸುವ ಕಾರವಾರ – ಹಾಸನ – ಬೆಂಗಳೂರು ಎಕ್ಸ್‌ಪ್ರೆಸ್‌ ರಾತ್ರಿ 2.50ಕ್ಕೆ ಹಾಸನದಿಂದ ಹೊರಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.