ADVERTISEMENT

ಹಾಸನಾಂಬೆ ದೇವಿಯ ದರ್ಶನ ಪಡೆದ 14.20ಲಕ್ಷ ಜನ

ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ: ದಾಖಲೆಯ ಆದಾಯ ಸಂಗ್ರಹ: ಮೊದಲ ಬಾರಿಗೆ ಹಲವು ವಿಶೇಷ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 14:22 IST
Last Updated 15 ನವೆಂಬರ್ 2023, 14:22 IST
ದರ್ಶನೋತ್ಸವದ ಕೊನೆಯ ದಿನವಾದ ಬುಧವಾರ ದರ್ಶನಕ್ಕೆ ಬಂದಿದ್ದ ಭಕ್ತರು
ದರ್ಶನೋತ್ಸವದ ಕೊನೆಯ ದಿನವಾದ ಬುಧವಾರ ದರ್ಶನಕ್ಕೆ ಬಂದಿದ್ದ ಭಕ್ತರು   

ಹಾಸನ: ಲಕ್ಷಾಂತರ ಭಕ್ತರು, ಎಲ್ಲಿ ನೋಡಿದರೂ ಸರದಿ ಸಾಲು, 14 ದಿನ ನಿತ್ಯ ಸಂಭ್ರಮ, ದೇವಿಯ ದರ್ಶನಕ್ಕೆ ಎಲ್ಲಿಲ್ಲದ ಕಾತುರ, ಮಕ್ಕಳಿಂದ ವೃದ್ಧರವರೆಗೆ ದೇವಿಯನ್ನು ಕಣ್ತುಂಬಿಕೊಂಡ ಭಕ್ತರು...

ನ.2 ರಿಂದ ಆರಂಭವಾಗಿದ್ದ ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರೆ ಬುಧವಾರ ಮುಕ್ತಾಯವಾಗಿದ್ದು, 12 ದಿನ ನಡೆದ ದೇವಿಯ ದರ್ಶನೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ನಗರಕ್ಕೆ ಬರುತ್ತಾರೆ. ಈ ಬಾರಿ ದಾಖಲೆಯ ಸಂಖ್ಯೆಯಲ್ಲಿ ಜನರು ಬಂದಿದ್ದು, ಜಿಲ್ಲಾಡಳಿತದ ನಿರೀಕ್ಷೆಯಾದ 10 ಲಕ್ಷಕ್ಕಿಂತ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಇದುವರೆಗೆ 14.20 ಲಕ್ಷ ಜನರು ದೇವಿಯ ದರ್ಶನ ಪಡೆದಿರುವುದಾಗಿ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೆಯ ದಿನ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ, ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ ಎಂಬ ಪ್ರತೀತಿ ಇದೆ.

ADVERTISEMENT

₹ 1000, ₹ 300 ದರದ ವಿಶೇಷ ಟಿಕೆಟ್, ಲಾಡು ಮಾರಾಟದಿಂದ ದಾಖಲೆಯೆ ₹ 6.15 ಕೋಟಿಗೂ ಅಧಿಕ ಆದಾಯ ಬಂದಿದೆ. ಹುಂಡಿ ಕಾಣಿಕೆಯಿಂದ ಇನ್ನೂ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ.

ಧಾರ್ಮಿಕ ವಿಧಿವಿದಾನದೊಂದಿಗೆ ಹಾಸನಾಂಬ ದೇಗುಲದ ಬಾಗಿಲು ಹಾಕಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ‘ಹಾಸನಾಂಬೆ ದರ್ಶನೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದಿಂದ ಯಶಸ್ವಿಯಾಗಿದೆ. 12 ದಿನಗಳ ಸಾರ್ವಜನಿಕ ದರ್ಶನದಲ್ಲಿ ಪ್ರತಿಯೊಬ್ಬ ಭಕ್ತರಿಗೂ ದರ್ಶನ ಪಡೆಯಲು ಉತ್ತಮ ರೀತಿಯ ಅವಕಾಶವನ್ನು ಕಲ್ಪಿಸಲಾಗಿತ್ತು. ದೇವಸ್ಥಾನ ಆಡಳಿತಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.

ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದಲೂ ಮಹಿಳೆಯರ ಸಂಖ್ಯೆ ಹೆಚ್ಚಿಗೆ ಇತ್ತು. ಈ ಬಾರಿ ವಿಶೇಷ ದರ್ಶನ ಹಾಗೂ ಲಾಡು ಪ್ರಸಾದ ಮಾರಾಟದಿಂದಲೂ ಮೂರು ಪಟ್ಟು ಹೆಚ್ಚು ಆದಾಯ ಬಂದಿದೆ. ಕಳೆದ ಬಾರಿ ₹ 1.29 ಕೋಟಿ ಸಂಗ್ರಹಿಸಲಾಗಿತ್ತು. ಆದರೆ ಈ ಬಾರಿ ₹ 6.15 ಕೋಟಿ ಸಂಗ್ರಹಿಸಲಾಗಿದ್ದು, ಹುಂಡಿ ಕಾಣಿಕೆ ಸಂಗ್ರಹದ ಬಗ್ಗೆ ಇನ್ನೆರಡು ದಿನದಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಹಾಸನಾಂಬ ಭಕ್ತರಿಗೆ ದರ್ಶನ ಪಡೆಯಲು ಯಾವುದೇ ರೀತಿ ತೊಂದರೆ ಆಗದಂತೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆಲವು ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಡುವಳಿಕೆಯಿಂದ ಬೇಸರವಾಗಿದೆ. 

ದೇವಾಲಯ ಗರ್ಭಗುಡಿ ಬಾಗಿಲು ಮುಚ್ಚುವ ಕೊನೆಯ ಕ್ಷಣದಲ್ಲಿ ಸ್ಥಳೀಯ ನಿವಾಸಿಗಳಿಗೆ ಹಾಗೂ ಇತರರಿಗೆ ದರ್ಶನಕ್ಕೆ ಅವಕಾಶ ನೀಡದಿರುವ ಬಗ್ಗೆ ಬೇಸರವಾಗಿದ್ದು, ಕೊನೆ ಕ್ಷಣದಲ್ಲಿ ಅಚಾತುರ್ಯವಾಗಿದೆ. ಮುಂದಿನ ವರ್ಷ ನಾನೇ ಶಾಸಕನಾಗಿ ಇರುತ್ತೇನೆ. ಈ ರೀತಿ ಯಾವುದೇ ತೊಂದರೆ ಆಗದಂತೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

‘ಈ ಬಾರಿ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಬಂದು ದರ್ಶನ ಪಡೆದಿದ್ದು, ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಹಾಸನಾಂಬ ದರ್ಶನ ಪಡೆದ ಗಣ್ಯರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ, ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಕೆ.ಗೋಪಾಲಯ್ಯ, ಶಾಸಕ ಶಿವಲಿಂಗೇಗೌಡ, ನ್ಯಾಯಾಧೀಶರು, ಚಲನಚಿತ್ರ ನಟರು ವಿವಿಧ ಮಠಗಳ ಮಠಾಧೀಶರು ಸೇರಿದಂತೆ ಹಲವಾರು ಗಣ್ಯರು. ಈ ಬಾರಿ ಹಾಸನಾಂಬ ದೇವಿಯ ದರ್ಶನ ಪಡೆದರು.

ಹಾಸನಾಂಬೆಯ ಒಡವೆಗಳನ್ನು ಜಿಲ್ಲಾ ಖಜಾನೆಗೆ ರವಾನಿಸಲಾಯಿತು

ಹಾಸನಾಂಬೆ ದರ್ಶನೋತ್ಸವದ ವಿವರ

ವಿವರ;2022;2023

ಭಕ್ತರ ಸಂಖ್ಯೆ;6 ಲಕ್ಷ;14.20 ಲಕ್ಷ

₹1 ಸಾವಿರ ಟಿಕೆಟ್‌;₹22.89 ಲಕ್ಷ;3.09 ಕೋಟಿ

₹300 ಟಿಕೆಟ್‌;68.27 ಲಕ್ಷ;2.35 ಕೋಟಿ

ಲಾಡು ಮಾರಾಟ;₹38.53 ಲಕ್ಷ;70.23 ಲಕ್ಷ

ಒಟ್ಟು ಆದಾಯ; 1.29 ಕೋಟಿ; 6.15 ಕೋಟಿ

ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬುಧವಾರ ಬೀಗಮುದ್ರೆ ಹಾಕಲಾಯಿತು
ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಿದ ನಂತರ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಶಾಸಕ ಸ್ವರೂಪ್‌ ಪ್ರಕಾಶ್‌ ಇದ್ದು.
ಹಾಸನಾಂಬ ಉತ್ಸವದ ಕೊನೆಯ ದಿನವಾದ ಬುಧವಾರ ದೇವಾಲಯದ ಆವರಣದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು

ಶಾಸಕ ಸ್ವರೂಪ್ ಭರ್ಜರಿ ಡ್ಯಾನ್ಸ್‌

ಹಾಸನಾಂಬ ಉತ್ಸವದ ಕೊನೆಯ ದಿನವಾದ ಬುಧವಾರ ದೇವಾಲಯದ ಆವರಣದಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಶಾಸಕ ಸ್ವರೂಪ್ ಪ್ರಕಾಶ್ ಭರ್ಜರಿ ಡ್ಯಾನ್ಸ್‌ ಮಾಡಿದರು. ಪ್ರತಿ ವರ್ಷದಂತೆ ಸಿದ್ದೇಶ್ವರ ಹಾಗೂ ವೀರಭದ್ರ ಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಭಕ್ತರು ಕೂಡ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಶಾಸಕ ಸ್ವರೂಪ್ ಕೂಡ ಭಕ್ತರಿಗೆ ಸಾಥ್ ನೀಡಿದ್ದು ತಮಟೆ ವಾದ್ಯಕ್ಕೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಭಕ್ತರು ಹಾಗೂ ಅಭಿಮಾನಿಗಳು ಶಾಸಕ ಸ್ವರೂಪ್ ಅವರನ್ನು ಮೇಲೆ ಎತ್ತಿ ಕುಣಿದರು. ಬುಧವಾರ ಬೆಳಿಗ್ಗೆ ಕೆಂಡೋತ್ಸವ ನಡೆದಿದ್ದು ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಕೆಂಡೋತ್ಸವದಲ್ಲಿ ಭಾಗವಹಿಸಿದ್ದರು. ಶಾಸಕ ಸ್ವರೂಪ್‌ ಪ್ರಕಾಶ್‌ ಕೂಡ ಉತ್ಸವದಲ್ಲಿ ಭಾಗವಹಿಸಿ ಗಮನ ಸೆಳೆದರು.

ಜಾತ್ರೆ ನಿರ್ವಹಿಸಿದ ಮಹಿಳಾ ಅಧಿಕಾರಿಗಳ ತಂಡ

ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವವನ್ನು ಮಹಿಳಾ ಅಧಿಕಾರಿಗಳ ತಂಡವೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಎಸ್ಪಿ ಮೊಹಮ್ಮದ್ ಸುಜೀತಾ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್. ಪೂರ್ಣಿಮಾ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಹಾಸನ ತಹಶೀಲ್ದಾರ್‌ ಶ್ವೇತಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಮಂಗಳಾ ಹೀಗೆ ಮಹಿಳಾ ಅಧಿಕಾರಿಗಳೇ ಈ ಬಾರಿಯ ಜಾತ್ರೋತ್ಸವದಲ್ಲಿ ಮಹತ್ತರ ಪಾತ್ರ ವಹಿಸಿದರು. ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಹಾಸನಾಂಬ ದರ್ಶನೋತ್ಸವದ ಆಯೋಜನೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಮೊದಲ ಬಾರಿಗೆ ದರ್ಶನೋತ್ಸವ ಸಂದರ್ಭದಲ್ಲಿ ಸಾರಿಗೆ ಬಸ್‌ನಲ್ಲಿ ಪ್ರವಾಸ ಪ್ಯಾಕೇಜ್ ಹೆಲಿಟೂರಿಸಂ ಪ್ಯಾರಾಸೈಲಿಂಗ್ ಪ್ಯಾರಾ ಮೋಟರಿಂಗ್ ಆಗಸದಿಂದ ಹಾಸನ ಸೇರಿದಂತೆ ಅನೇಕ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ದರ್ಶನೋತ್ಸವ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆಯಲು ಹಾಗೂ ದಸರಾ ಮಾದರಿ ವಿದ್ಯುತ್‌ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.