ADVERTISEMENT

16.10 ಕೋಟಿ ವೆಚ್ಚದಲ್ಲಿ ವಸತಿಶಾಲೆಗೆ ಕಟ್ಟಡ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 9:39 IST
Last Updated 2 ಡಿಸೆಂಬರ್ 2017, 9:39 IST
ಕೊಣನೂರು ಹೊಬಳಿಯ ಕಬ್ಬಳಿಗೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಸಚಿವ ಎ. ಮಂಜು ಭೂಮಿಪೂಜೆ ಸಲ್ಲಿಸಿ ಮಾತನಾಡಿದರು
ಕೊಣನೂರು ಹೊಬಳಿಯ ಕಬ್ಬಳಿಗೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಸಚಿವ ಎ. ಮಂಜು ಭೂಮಿಪೂಜೆ ಸಲ್ಲಿಸಿ ಮಾತನಾಡಿದರು   

ಕೊಣನೂರು: ತಾಲ್ಲೂಕಿನಲ್ಲಿ ₹ 16.10 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ‘ಗ್ರಾಮೀಣ ಭಾಗದಲ್ಲಿ ವಸತಿ ಶಾಲೆ ಸ್ಥಾಪಿಸಿ ಅಗತ್ಯ ಸೌಕರ್ಯ ಕಲ್ಪಿಸುವ ಮೂಲಕ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿದೆ’ ಎಂದರು.

ಭಕ್ತರ ಅನುಕೂಲಕ್ಕಾಗಿ ₹ 3.5 ಕೋಟಿ ವೆಚ್ಚದಲ್ಲಿ ಬೆಟ್ಟದ ಅಭಿವೃದ್ಧಿ ಕೆಲಸ ನಡೆದಿದೆ. ಇದನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾಡಲಾಗುತ್ತಿದೆ. ಈಗ ವಸತಿ ಶಾಲೆ ನಿರ್ಮಿಸಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಉಪಯುಕ್ತ ಸವಲತ್ತು ಒದಗಿಸಲಾಗುವುದು ಎಂದರು.

‘ಅಭಿವೃದ್ಧಿ ಕಾರ್ಯಗಳ ಮೂಲಕ ನನ್ನ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದ್ದೇನೆ. ಕಣಿವೆ ಬಸಪ್ಪ ಮಾರ್ಗ ರಸ್ತೆಯನ್ನು ಹಂಡ್ರಂಗಿವರೆಗೆ ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು 5 ಮೀ. ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಸಾಲಗೇರಿ ಮಾರ್ಗವಾಗಿ ₹ 1.20 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ನಡೆಯಲಿದೆ. ಕಾವೇರಿ ನದಿಗೆ ಅಡ್ಡಲಾಗಿ ರಾಮನಾಥಪುರ ಹಾಗೂ ಬಸವಾಪಟ್ಟಣ- ಬಳಿ ಎರಡು ಸಂಪರ್ಕ ಸೇತುವೆ ನಿರ್ಮಿಸುವ ಹಾಗೂ ಗಂಗೂರು ಹ್ಯಾಂಡ್ ಪೋಸ್ಟ್‌ವರೆಗಿನ ರಸ್ತೆಯ ಡಾಂಬರೀಕರಣ ಮಾಡುವ ಉದ್ದೇಶವು ಇದೆ ಎಂದು ತಿಳಿಸಿದರು.

ವಸತಿ ಶಾಲೆ: ಕಬ್ಬಳಿಗೆರೆ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ 6034.28 ಚ.ಮೀ ವಿಸ್ತೀರ್ಣ ಹೊಂದಿದೆ. 5 ಬೋಧನಾ ಕೊಠಡಿಗಳು, 2 ಪ್ರಯೋಗಾಲಯ,1 ಗಣಕಯಂತ್ರ ಕೊಠಡಿ,1ಯೋಗ ಕೊಠಡಿ 3 ಸಿಬ್ಬಂದಿ ಕೊಠಡಿ ಮತ್ತು 6 ಶೌಚಾಲಯ ಹೊಂದಿರಲಿದೆ.

ಜೊತೆಗೆ ಬಾಲಕಿಯರ ವಸತಿನಿಲಯ, ಅಡುಗೆ ಮತ್ತು ಭೋಜನಾಲಯ, ಸಿಬ್ಬಂದಿಗೆ ವಸತಿ ನಿಲಯ, ರಂಗಮಂದಿರ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.' ಜಿ.ಪಂ. ಮಾಜಿ ಸದಸ್ಯ ಭೈರೇಗೌಡ ಮಾತನಾಡಿದರು.

ಡಿಡಿಪಿಐ ಮಂಜುನಾಥ್, ಬಿಇಒ ನಾಗೇಶ್, ಹಾಸನ ಬಿಇಒ ಬಲರಾಮ್, ಸಿಡಿಪಿಒ ಭಾಗೀರಥಿ, ಜಿ.ಪಂ. ಸದಸ್ಯ ರವಿ, ರೇವಣ್ಣ, ಮಗ್ಗೆ ರಾಜೇಗೌಡ, ತಾ.ಪಂ. ಉಪಾಧ್ಯಕ್ಷ ನಾಗರಾಜು, ಸದಸ್ಯ ವೀರಾಜು, ಪುಟ್ಟರಾಜು, ಮಾಜಿ ಸದಸ್ಯ ಶ್ರೀನಿವಾಸಮೂರ್ತಿ, ಚಿಕ್ಕಹಳ್ಳಿ ಗ್ರಾ.ಪಂ ಅಧ್ಯಕ್ಷ ರವಿ, ಸರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದೇಗೌಡ, ಹುಲಿಕಲ್ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಕಂಬೇಗೌಡ, ಮುಖಂಡ ಚನ್ನೇಗೌಡ, ಕೃಷ್ಣೇಗೌಡ, ಭೀಮಣ್ಣ, ಹನುಮೇಗೌಡ, ಚೆಲುವಶೆಟ್ರು, ಪುಟ್ಟರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.