ADVERTISEMENT

ಹಾಸನ ಅಭಿವೃದ್ಧಿಗೆ ₹165 ಕೋಟಿ ಅನುದಾನ

ಒಳಚರಂಡಿ ಕಾಮಗಾರಿಗೆ ಶಾಸಕ ಪ್ರೀತಂ ಗೌಡ ಚಾಲನೆ; ನದಿ, ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:35 IST
Last Updated 14 ಜನವರಿ 2022, 5:35 IST
ಹಾಸನದ ಡೇರಿ ವೃತ್ತದಿಂದ ಬಿ.ಕಾಟಿಹಳ್ಳಿ, ಕಾಟಿಹಳ್ಳಿ ಕೊಪ್ಪಲು ಒಳಗೊಂಡಂತೆ ವಸತಿ ಪ್ರದೇಶಗಳ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಪ್ರೀತಂ ಜೆ. ಗೌಡ ಚಾಲನೆ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು
ಹಾಸನದ ಡೇರಿ ವೃತ್ತದಿಂದ ಬಿ.ಕಾಟಿಹಳ್ಳಿ, ಕಾಟಿಹಳ್ಳಿ ಕೊಪ್ಪಲು ಒಳಗೊಂಡಂತೆ ವಸತಿ ಪ್ರದೇಶಗಳ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಪ್ರೀತಂ ಜೆ. ಗೌಡ ಚಾಲನೆ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು   

ಹಾಸನ: ನಗರದ ಡೇರಿ ವೃತ್ತದಿಂದ ಬಿ.ಕಾಟಿಹಳ್ಳಿ, ಕಾಟಿಹಳ್ಳಿ ಕೊಪ್ಪಲು ಒಳಗೊಂಡಂತೆ ವಸತಿ ಪ್ರದೇಶಗಳ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಪ್ರೀತಂ ಜೆ. ಗೌಡ ಗುರುವಾರ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ₹165 ಕೋಟಿಅನುದಾನ ನೀಡಿದ್ದರು. ನಗರದ ಸುತ್ತಮುತ್ತಲಿನ ಕೆರೆಗಳಿಗೆ ಹಾಗೂ ನದಿಗಳಿಗೆ
ಒಳಚರಂಡಿಯ ಕಲುಷಿತ ನೀರು ನೇರವಾಗಿ ಸೇರುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲುಷಿತನೀರು ಶುದ್ಧೀಕರಣ ಘಟಕ ಸ್ಥಾಪನೆ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದರು.

ಕಲುಷಿತ ನೀರು ಶುದ್ಧೀಕರಣ ಘಟಕಗಳನ್ನು ಮಾಡುವುದರ ಜತೆಗೆ ಒಳಚರಂಡಿ ವ್ಯವಸ್ಥೆಇಲ್ಲದಿರುವ ಪ್ರದೇಶ ಗಳನ್ನು ಗುರುತಿಸಿ, ಅಂತಹ ಪ್ರದೇಶಗಳಿಗೆ ಪೈಪ್ ಲೈನ್ ವ್ಯವಸ್ಥೆಮಾಡುವುದರ ಮೂಲಕ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದು ಸುತ್ತಮುತ್ತಲಿನ ಜನರ ಬಹು ದಿನಗಳ ಕನಸು ಆಗಿತ್ತು’ ಎಂದರು.

ADVERTISEMENT

ಹಾಸನದ ಸುತ್ತಮುತ್ತಲಿನ 25 ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿ ಅಮೃತ್ಯೋಜನೆ ಮೂಲಕ ದಿನದ 24 ಗಂಟೆ ಕುಡಿಯುವ ನೀರು ನೀಡುವ ಯೋಜನೆ ಕಾರ್ಯಗತಗೊಳಿಸ ಲಾಗಿದೆ. ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ನಂತರ ರಸ್ತೆಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.

ಸ್ಥಳೀಯರ ಬೇಡಿಕೆಯಂತೆ ಅರಸೀಕೆರೆ ರಸ್ತೆಯ ಎಡ ಮತ್ತು ಬಲ ಭಾಗ ಡೇರಿ ಸರ್ಕಲ್‌ನಿಂದ ಎಸ್.ಎಂ ಕೃಷ್ಣ ನಗರದವರೆಗೆ ಸುಮಾರು 16 ಬಡಾವಣೆಗಳಿಗೂ ₹24ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಯನ್ನು ಈ ವರ್ಷದ ಅಂತ್ಯದ ಒಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಈ ಕಾಮಗಾರಿ ಮುಗಿದ ನಂತರದ ದಿನಗಳಲ್ಲಿ ಸುಮಾರು ₹16 ಕೋಟಿ ವೆಚ್ಚದಕಾಂಕ್ರೀಟ್‌ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ದಾಸರಕಪ್ಪಲು ಭಾಗದ ಜಯನಗರ, ಗುಂಡೇಗೌಡನ ಕೊಪ್ಪಲು, ಬಟ್ಲರ್ಕೊಪ್ಪಲು ಭಾಗ, ಸಾಲಗಾಮೆ ರಸ್ತೆಗೆ ಹೊಂದಿಕೊಂಡಿರುವ ಮಾವಿನ ಹಳ್ಳಿ, ಹರಳಳ್ಳಿ ಸೇರಿದಂತೆ ಅಲ್ಲಿನ ಒಳಚರಂಡಿ ವ್ಯವಸ್ಥೆ ಮಾಡಲು ಅಂದಾಜು ₹24 ಕೋಟಿ ಯು.ಜಿ.ಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಪೆನ್ಷನ್‌ ಮೊಹಲಾ, ಚಿಪ್ಪಿನಕಟ್ಟೆ, ಚಿಕ್ಕನಾಳು, ಇಲಾಯಿ ನಗರ ಸೇರಿದಂತೆ 5 ವಾರ್ಡ್‌ಗಳ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಹೊಸಲೈನ್ ರಸ್ತೆಯ ರಾಮ ವೃತ್ತದ ಬಳಿ ಕಾಮಗಾರಿಗೆ ಪ್ರೀತಂ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಆರ್.ಮೋಹನ್, ಸದಸ್ಯ ಅಮೀರ್ ಜಾನ್, ನಾಮ ನಿರ್ದೇಶಿತ ಸದಸ್ಯ ಅರುಣ್ ಕುಮಾರ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್‌ ಇದ್ದರು.

‘ದೇವರು ಒಳ್ಳೆಯ ಬುದ್ಧಿ ಕೊಡಲಿ’

ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಪ್ರೀತಂ ಗೌಡ, ‘ಕೋವಿಡ್ಸಂದರ್ಭದಲ್ಲಿ ಎಲ್ಲರೂ ಅವರವರ ಇತಿಮಿತಿಯಲ್ಲಿರಬೇಕು. ಆರೋಗ್ಯಕ್ಕೆ ಎಲ್ಲರೂ ಒತ್ತು ನೀಡಬೇಕು. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡುತ್ತಿದ್ದೇನೆ. ಪಾದಯಾತ್ರೆಮಾಡಿದರೆ ಮಾತ್ರ ಜನ ಮತ ಹಾಕುತ್ತಾರೆ ಅಂದುಕೊಂಡಿದ್ದರೆ ಅದು ತಪ್ಪು ಭಾವನೆ.ಅವರ ಹಾಗೂ ಪಕ್ಷದ ಒಳಿತಿಗಾಗಿ ಕೋರ್ಟ್ ಮತ್ತು ಸರ್ಕಾರದ ಆದೇಶ ಪಾಲನೆ ಮಾಡಲು ಒಳ್ಳೆಯ ಬುದ್ಧಿಯನ್ನು ದೇವರು ಕೊಡಲಿ’ ಎಂದರು.

ಉದ್ದೂರು ರಸ್ತೆ ಹೆಸರಿನಲ್ಲಿ ರಾಜಕೀಯ: ಪ್ರೀತಂ ಗೌಡ

ಹಾಸನ: ‘ಉದ್ದೂರು ರಸ್ತೆ ಹೆಸರಿನಲ್ಲಿ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ನನಗೆ ವಿಘ್ನ ತಂದೊಡ್ಡಿದಷ್ಟೂ ಗಟ್ಟಿಯಾಗುತ್ತೇನೆ’ ಎಂದು ಶಾಸಕ ಪ್ರೀತಂ ಜೆ. ಗೌಡ ಅವರು ಪರೋಕ್ಷವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ನಾಯಕರಿಗೆ ತಿರುಗೇಟು ನೀಡಿದರು.

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಉದ್ದೂರು ರಸ್ತೆ ವಿಚಾರದಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಕಾಮಗಾರಿ ಸುಸೂತ್ರವಾಗಿ ಮುಗಿದಿದೆ ಎಂದರು.

‘ಇತ್ತೀಚಿನ ಬೆಳವಣಿಗೆಯಿಂದ ಕಾಮಗಾರಿ ವಿಷಯ ಇಡೀ ಕ್ಷೇತ್ರದ ಜನರಿಗೆ ಗೊತ್ತಾಗಿದೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ಶಾಸಕರು ಪೂರ್ಣ ಗೊಳಿಸಿದರು ಎಂಬುದು ಜನರಿಗೆ ಅರಿವಾಗಿದೆ. ಮುಂದೆಯೂ ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸುವೆ’ ಎಂದು ಹೇಳಿದರು.

‘ನಗರಸಭೆಯ 17ರಿಂದ 22ನೇ ವಾರ್ಡ್ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನಸಂಖ್ಯೆಯಲ್ಲಿದ್ದು, ಹಲವು ದಶಕದಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬ ಕೊರಗು ಜನರಲ್ಲಿತ್ತು. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ರಸ್ತೆ, ಒಳಚರಂಡಿಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಾಸನ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಆಶಯ. ಕೆಲ ರಾಜಕೀಯ ಪಂಡಿತರು ಏನೇನೋ ಲೆಕ್ಕಾಚಾರ ಹಾಕುತ್ತಿದ್ದರು. ಯಾರು ಏನೇ ಹೇಳಿದರೂ, ಶಾಸಕನಾಗಿ ನನ್ನ ಜವಾಬ್ದಾರಿ ಇದೆ. ವಿಳಂಬವಾಗಿ ಯಾದರೂ, ಈ ಭಾಗದ ಅಭಿವೃದ್ಧಿಗೂ ಒತ್ತು ನೀಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.