ಹಾಸನ: ‘ಚನ್ನರಾಯಪಟ್ಟಣ ತಾಲ್ಲೂಕಿನ ಗುರುಪ್ರಸಾದ್ ಎಂಬುವರು ಮೈಕ್ರೋ ಲೀಸಿಂಗ್ ಅಂಡ್ ಫಂಡಿಂಗ್ ಹೆಸರಿನಲ್ಲಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದು, ನ್ಯಾಯ ದೊರಕಿಸಿಕೊಡಬೇಕು’ ಎಂದು ವಂಚನೆಗೊಳಗಾದವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
‘ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ನಮಗೆ ಜೋಗೀಪುರ ಗ್ರಾಮದ ಗುರುಪ್ರಸಾದ್, ಹಣ ಕಟ್ಟಿಸಿಕೊಂಡು ಮರುಪಾವತಿ ಮಾಡಿಲ್ಲ. ಕಂಪನಿಗೆ ಸದಸ್ಯರನ್ನು ಹೆಚ್ಚು ನೋಂದಣಿ ಮಾಡಿಸಿದರೆ ಪಾವತಿಸಿರುವ ಹಣಕ್ಕೆ ದುಪ್ಪಟ್ಟು ಹಣ ನೀಡಲಾಗುವುದು ಎಂದು ನಂಬಿಸಿ ₹ 2 ಕೋಟಿ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಭುವನೇಶ್ವರದ ಸಾಹಿದ್ ನಗರದಲ್ಲಿ ಕಂಪನಿಯ ಮುಖ್ಯ ಕಚೇರಿಯಿದ್ದು, ಮುಖ್ಯಸ್ಥ ಗುರುಪ್ರಸಾದ್ ಮಿಶ್ರ, ಅಶೋಕ್ ಕುಮಾರ್ ಪಟ್ನಾಯಕ್, ಬೈಕುಂಠನಾಥ್ ಪಟ್ನಾಯಕ್, ರಮೇಶ್ ಚಂದ್ರ ಬಿಸ್ವಾಲ್, ಬಜನ ಪಟ್ನಾಯಕ್ ಹಾಗೂ ಕಾಳಿ ಪ್ರಸಾದ್ ಮಿಶ್ರಾ ನಿರ್ದೇಶಕರಾಗಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲೂ ಶಾಖೆ ತೆರೆಯಲಾಗಿದೆ ಎಂದು ನಂಬಿಸಿದ್ದರು’ ಎಂದು ವಿವರಿಸಿದರು.
‘ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 500 ಸದಸ್ಯರಿಂದ ₹ 2 ಕೋಟಿ ಹಣ ಕಟ್ಟಿಸಿಕೊಂಡು ಕಚೇರಿ ಮುಚ್ಚಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಹಣಕ್ಕಾಗಿ ಅವರ ಮನೆಗೆ ಅಲೆದು ಸಾಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಈ ಸಂಬಂಧ ಗುರುಪ್ರಸಾದ್ ವಿರುದ್ಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ. ಕೂಡಲೇ ಅವರನ್ನು ವಶಕ್ಕೆ ಪಡೆದು ಹಣ ಮರು ಪಾವತಿಸಲು ಸೂಚಿಸಬೇಕು’ ಎಂದು ಹಣ ಪಾವತಿಸಿರುವ ರತ್ಮಮ್ಮ, ಗಿರೀಶ್, ಅನಂತ್, ಕಿರಣ್ ಅವರು ಎಸ್‌ಪಿ ಪ್ರಕಾಶ್ ಗೌಡರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.