ಹಾಸನ: ಈಚೆಗೆ ಲಂಡನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಎತ್ತರ ಜಿಗಿತದಲ್ಲಿ ಬೆಳ್ಳಿ ಸಾಧನೆ ಮಾಡಿದ ಜಿಲ್ಲೆಯ ಎಚ್.ಎನ್. ಗಿರೀಶ್, 2009ರಲ್ಲಿ ನಡೆದ ಕುಬ್ಜರ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಚೇತನ್ ಹಾಗೂ ಜಿಲ್ಲೆಯ ಅಥ್ಲೆಟಿಕ್ಸ್ ತರಬೇತುದಾರ ಸತ್ಯನಾರಾಯಣ ಅವರನ್ನು ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಗಿರೀಶ್, `2006ರಲ್ಲಿ ಇದೇ ಕ್ರೀಡಾಂಗಣದಲ್ಲಿ ಮೈಸೂರು ವಿ.ವಿ. ಅಂತರ ಕಾಲೇಜು ಕ್ರೀಡಾಕೂಟ ನಡೆದಾಗ ಅಂಗವಿಕಲ ಎಂಬ ಕಾರಣಕ್ಕೆ ನನಗೆ ಅವಕಾಶ ನಿರಾಕರಿಸಿದ್ದರು. ಕಣ್ಣೀರಿಡುತ್ತ ನಾನು ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದರೆ ಗೆಳೆಯರು ಆಯೋಜಕರ ಮೇಲೆ ಒತ್ತಡ ಹೇರಿ ನನಗೆ ಅವಕಾಶ ಲಭಿಸುವಂತೆ ಮಾಡಿದ್ದರು. ಅಂದು ಸಾಮಾನ್ಯ ವಿದ್ಯಾರ್ಥಿಗಳ ಜತೆಗೆ ಸ್ಪರ್ಧಿಸಿ ನಾನು ಕಂಚಿನ ಪದಕ ಪಡೆದಿದ್ದೆ. ಕೊನೆಯಲ್ಲಿ ನನ್ನನ್ನು ಇದೇ ಕ್ರೀಡಾಂಗಣದಲ್ಲಿ ಸನ್ಮಾನಿಸಿದ್ದರು. ಇಂಥ ಹತ್ತು ಹಲವು ಪ್ರಸಂಗಗಳು ನಡೆದಿವೆ. ನಂತರದ ದಿನಗಳಲ್ಲಿ ಹಲವರು ನನಗೆ ಪ್ರೋತ್ಸಾಹ ನೀಡಿ ಈ ಸ್ಥಾನಕ್ಕೆ ಏರಿಸಿದ್ದಾರೆ~ ಎಂದರು.
ಹಾಸನ ಜಿಲ್ಲಾ ಕ್ರೀಡಾಂಗಣಕ್ಕೆ ಸೌಲಭ್ಯಗಳನ್ನು ನೀಡಬೇಕು, ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು, ತನ್ನ ಹುಟ್ಟೂರು ಹೊಸನಗರದಲ್ಲೂ ಮೂಲ ಸೌಲಭ್ಯಗಳಿಲ್ಲ, ಅದನ್ನು ಒದಗಿಸಬೇಕು ಎಂದು ಸಚಿವರು, ಜನಪ್ರತಿನಿಧಿಗಳನ್ನು ಗಿರೀಶ್ ಮನವಿ ಮಾಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾನೂನು ಸಚಿವ ಸುರೇಶ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಇತರ ಜನಪ್ರತಿನಿಧಿಗಳು ಫಲಪುಷ್ಪ, ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗಿರೀಶ್ ಸಾಧನೆಯನ್ನು ಕೊಂಡಾಡಿದ ಸಚಿವ ಸುರೇಶ್ ಕುಮಾರ್, `ದೇಶದ ಕ್ರೀಡಾ ಕ್ಷೇತ್ರವನ್ನೇ ಕ್ರಿಕೆಟ್ ಆಳುತ್ತಿರುವಾಗ ಗಿರೀಶ್ ಬೇರೆ ಕ್ರೀಡೆಯನ್ನು ಆಯ್ಕೆಮಾಡಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇಂದಿನ ಯುವ ಜನಾಂಗ ಇದನ್ನು ಗಮನಿಸಬೇಕು. ಗಿರೀಶ್ ಸಾಧನೆಯನ್ನು ಗಮನಿಸಿ ನಗರಾಭಿವೃದ್ಧಿ ಪ್ರಾಧಿಕಾರ ಅವರಿಂದ ಅರ್ಜಿಯನ್ನೂ ಪಡೆಯದೆ ಸ್ವಯಂ ಪ್ರೇರಣೆಯಿಂದ ಅವರಿಗೆ ನಿವೇಶನ ನೀಡಿದೆ. ಇದಕ್ಕಾಗಿ ಪ್ರಾಧಿಕಾರವನ್ನೂ ಅಭಿನಂದಿಸಬೇಕಾಗಿದೆ~ ಎಂದರು. ಬಳಿಕ ಅವರು ಪ್ರಾಧಿಕಾರದ ಪರವಾಗಿ ನಿವೇಶನದ ಪತ್ರವನ್ನು ಗಿರೀಶ್‌ಗೆ ಹಸ್ತಾಂತರಿಸಿದರು.
ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗಿರೀಶ್ ಹಾಗೂ ಅವರ ಪಾಲಕರನ್ನು ಅಭಿನಂದಿಸಿ ಸಾಧನೆ ಮಾಡಿರುವ ಗಿರೀಶ್‌ಗೆ ಒಂದು ಲಕ್ಷ ರೂಪಾಯಿ ಡಿ.ಡಿ. ಹಾಗೂ ಚೇತನ್‌ಗೆ 25ಸಾವಿರ ರೂಪಾಯಿಯ ಚೆಕ್ ನೀಡಿದರು.
ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಚ್.ಡಿ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ರಾಮಕೃಷ್ಣ, ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ಜಿಲ್ಲಾಧಿಕಾರಿ ಮೋಹನರಾಜ್, ಎಸ್.ಪಿ. ಅಮಿತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಹೇಮಾವತಿ ಪ್ರತಿಮೆ ಮುಂದಿ ನಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು.
ಹೇಮಾವತಿ ಪ್ರತಿಮೆ ಬಳಿ ಶಾಸಕ ಎಚ್.ಎಸ್.ಪ್ರಕಾಶ್ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮುಂತಾದವರು ಗಿರೀಶ್‌ಅವರನ್ನು ಸ್ವಾಗತಿಸಿದರು. ನಂತರ ತಮಟೆ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಾರೂಟಿನಲ್ಲಿ ಗಿರೀಶ್ ತಂದೆ ತಾಯಿ ಹಾಗೂ ಕೋಚ್ ಸತ್ಯನಾರಾಯಣ ಕುಳಿತಿದ್ದರು. ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಜಿಲ್ಲಾ ಸ್ಕೌಟ್ಸ್ ಮತ್ತು ಗೌಡ್ಸ್ ವಿದ್ಯಾರ್ಥಿಗಳು, ಹಾಸನಾಂಬ ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಭಾರತೀಯ ಸೇವಾದಳದ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.