ADVERTISEMENT

ಹಾಸನ | 2300 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

ಸಾರ್ವಜನಿಕರಿಂದ ವ್ಯಾಪಕ ದೂರು: ನಗರಸಭೆಯಿಂದ ಬೀದಿ ನಾಯಿ ಸೆರೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:31 IST
Last Updated 22 ಜುಲೈ 2024, 15:31 IST
ಹಾಸನದಲ್ಲಿ ಸೋಮವಾರ ನಗರಸಭೆ ವತಿಯಿಂದ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ನಡೆಯಿತು
ಹಾಸನದಲ್ಲಿ ಸೋಮವಾರ ನಗರಸಭೆ ವತಿಯಿಂದ ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ನಡೆಯಿತು   

ಹಾಸನ: ನಗರದಾದ್ಯಂತ ಹೆಚ್ಚುತ್ತಿರುವ ಬೀದಿನಾಯಿ ಉಪಟಳದಿಂದ ಬೇಸತ್ತಿರುವ ನಾಗರಿಕರು ದೂರುಗಳನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನಗರಸಭೆಯಿಂದ ಬೀದಿ ನಾಯಿ ಸೆರೆ ಕಾರ್ಯಾಚರಣೆ ಸೋಮವಾರ ಆರಂಭಿಸಲಾಗಿದೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ನಗರಸಭೆ ಸಾಮಾನ್ಯ ಸಭೆಗಳಲ್ಲಿಯೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ನಗರಾಭಿವೃದ್ಧಿ ಹಾಗೂ ಪಶು ಪಾಲನಾ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಬೀದಿ ನಾಯಿ ಸೆರೆ ಕಾರ್ಯಾಚರಣೆ ಆರಂಭವಾಗಿದೆ.

ಈ ಕುರಿತು ವಿವರ ನೀಡಿದ ನಗರಸಭೆಯ ಪರಿಸರ ಎಂಜಿನಿಯರ್ ವೆಂಕಟೇಶ್, ‘ನಗರದಲ್ಲಿ 2,300 ಬೀದಿ ನಾಯಿಗಳನ್ನು ಸೆರೆಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮುಂದಿನ ನಾಲ್ಕು ತಿಂಗಳು ಕಾರ್ಯಾಚರಣೆ ನಡೆಯಲಿದೆ ಎಂದರು.

ADVERTISEMENT

ನಗರದ ಎಲ್ಲ ವಾರ್ಡ್‌ಗಳಿಗೆ ತೆರಳಿ ನಗರಸಭೆ ವತಿಯಿಂದ ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗುವುದು. ನಂತರ ಕೈಗಾರಿಕಾ ಪ್ರದೇಶದಲ್ಲಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಈಗಾಗಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಚಿಕಿತ್ಸೆ ನಂತರ ಎಲ್ಲ ನಾಯಿಗಳನ್ನು ಸೆರೆ ಹಿಡಿದ ಸ್ಥಳಗಳಿಗೆ ತಂದು ಬಿಡಲಾಗುವುದು. ಸಾರ್ವಜನಿಕರು ಬೀದಿ ನಾಯಿಗಳ ಸೆರೆ ಕಾರ್ಯಾಚರಣೆ ವೇಳೆ, ತಮ್ಮ ಸಾಕು ನಾಯಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಕಾರ್ಯಾಚರಣೆ ವೇಳೆ ಸಾಕು ನಾಯಿಗಳು ಸೆರೆಯಾದರೆ, ನಗರಸಭೆ ಜವಾಬ್ದಾರಿ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಳೆದ ಎರಡು ವರ್ಷದಿಂದ ಬೀದಿನಾಯಿಗಳ ಸೆರೆ ಕಾರ್ಯಾಚರಣೆ ನಡೆಯದೆ ನಾಯಿಗಳ ಸಂತತಿ ಹೆಚ್ಚಾಗಿದ್ದು, ಇನ್ನು ಮುಂದೆ ಪ್ರತಿವರ್ಷ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಡೆಸಲಾಗುವುದು. ಇದಕ್ಕಾಗಿಯೇ ನಗರಸಭೆಗೆ ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.

ನಗರದಾದ್ಯಂತ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರು ಮಕ್ಕಳನ್ನು ಹೊರಗೆ ಬಿಡಲು ಹಿಂದೇಟು ಹಾಕುವಂತಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ‘ನಮ್ಮ ಜನ ನಮ್ಮ ಧ್ವನಿ’ ವಿಶೇಷ ವರದಿ ಪ್ರಕಟಿಸಲಾಗಿತ್ತು.

ನಾಲ್ಕು ತಿಂಗಳು ನಡೆಯಲಿರುವ ಸೆರೆ ಕಾರ್ಯಾಚರಣೆ ಸಾಕು ನಾಯಿಗಳನ್ನು ಮನೆಗಳಲ್ಲಿಯೇ ಕಟ್ಟಲು ಮನವಿ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾರ್ಯಾಚರಣೆ

2 ವರ್ಷಗಳ ಹಿಂದೆ ಒಂದು ಸಾವಿರ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ಜಿಯೋ ಟ್ಯಾಗ್ ಅಳವಡಿಸಲಾಗಿತ್ತು

-ವೆಂಕಟೇಶ್‌ ನಗರಸಭೆ ಪರಿಸರ ಎಂಜಿನಿಯರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.