ADVERTISEMENT

24 ತಾಸಿನಲ್ಲಿ ರೈತರ ಸಾಲ ಮನ್ನಾ

ಜೆಡಿಎಸ್ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 11:41 IST
Last Updated 7 ಮೇ 2018, 11:41 IST

ಹಾಸನ: ‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಗೊರೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರು ಮತ್ತೆ ಸಾಲಗಾರರು ಆಗಬಾರದೆಂಬ ಉದ್ದೇಶದಿಂದ ಕೃಷಿ ನೀತಿ ಜಾರಿಗೆ ತರಲಾಗುತ್ತಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು. ಸ್ತ್ರಿ ಶಕ್ತಿ ಸಂಘಗಳು ಮಾಡಿರುವ ₹4,400 ಕೋಟಿ ಸಾಲ ಮನ್ನಾ ಮಾಡುವಂತೆ ಬೇಡಿಕೆ ಬಂದಿದೆ. ಇದರ ಬಗ್ಗೆಯೂ ಪರಿಶೀಲಿಸಲಾಗುವುದು ಎಂದರು.

ಗೊರೂರು ಅಣೆಕಟ್ಟೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವುದು, ಕೆಆರ್‌ಎಸ್‌ ಮಾದರಿಯಲ್ಲಿ ಬೃಂದಾವನ ನಿರ್ಮಾಣ ಹಾಗೂ ಕಟ್ಟಾಯ ಹೋಬಳಿ ದತ್ತು ಪಡೆದು ಮಾದರಿ ಹೋಬಳಿಯಾಗಿಅ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಚುನಾವಣೆ ಸಂದರ್ಭದಲ್ಲಿ ಸಿಗುವ ಹಣ ಎರಡು ದಿನಕ್ಕೆ ಮಾತ್ರ ಸೀಮಿತ. ಶಾಶ್ವತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ.ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು. ಸಕಲೇಶಪುರದ ಬಿಜೆಪಿ ಅಭ್ಯರ್ಥಿ ಜಿಮ್ ಸೋಮಶೇಖರ್‌ ಬೆಂಗಳೂರಿನಲ್ಲಿ ನನ್ನ ಮನೆ ಸಮೀಪದಲ್ಲಿಯೇ ವಾಸ ಇರುವುದು. ಮೀಟರ್‌ ಬಡ್ಡಿ ದಂಧೆ ಮಾಡಿಕೊಂಡಿರುವ ಇವರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸೋಮಶೇಖರ್ ಗೆದ್ದರೆ ಸಕಲೇಶಪುರದಲ್ಲಿ ಇರುವುದಿಲ್ಲ. ಬೆಂಗಳೂರಿನಲ್ಲಿ ಬಡ್ಡಿ ದಂಧೆ ಮಾಡುತ್ತಾನೆ. ಜನರು ಸಮಸ್ಯೆ ಹೊತ್ತು ರಾಜಧಾನಿಗೆ ಅಲೆಯಬೇಕಾಗುತ್ತದೆ. ಅಂತವರನ್ನು ಗೆಲ್ಲಿಸಬೇಡಿ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಿನಿಮಾ ನಟರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕುಮಾರ ಸ್ವಾಮಿ, ನಿರ್ದಿಷ್ಟ ಪಕ್ಷದ ಜತೆ ಗುರುತಿಸಿಕೊಂಡು ಕಾರ್ಯಕರ್ತರಂತೆ ಕೆಲಸ ಮಾಡಲಿ. ಇದಕ್ಕೆ ಯಾವುದೇ ತಕರಾರು ಇಲ್ಲ. ಅದು ಬಿಟ್ಟು ಎಲ್ಲ ಪಕ್ಷಗಳ ಪರ ಪ್ರಚಾರ ಮಾಡಿದರೆ ಬದ್ಧತೆ ಇರುವುದಿಲ್ಲ. ಇದು ಒಂದು ರೀತಿ ವ್ಯಾಪಾರ ಆಗಿದೆ. ಬಣ್ಣದ ಪ್ರಪಂಚವೇ ಬೇರೆ. ಆದ್ದರಿಂದ ಸಿನಿಮಾ ನಟರ ಮಾತಿಗೆ ಮರುಳಾಗಬೇಡಿ ಎಂದು ಸಲಹೆ ನೀಡಿದರು.

ಗೊರೂರಿನ ಆಟೋ ಚಾಲಕರ ಸಂಘದ ಅಧ್ಯಕ್ಷ ಒಂದು ತಿಂಗಳ ದುಡಿಮೆ ₹10,000 ಅನ್ನು ಜೆಡಿಎಸ್ ಪಕ್ಷಕ್ಕೆ ದೇಣಿಗೆ ನೀಡಿ, ಕುಮಾರಸ್ವಾಮಿ ಪಾದಕ್ಕೆ ನಮಸ್ಕರಿಸಿದರು. ಇದೇ ವೇಳೆ ಹಲವು ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಯಾದರು.

ಸಿ.ಎಂ ಅಪ್ಪನಾಣೆ ಗೆಲ್ಲುತ್ತಾರೆಯೇ ?
ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಅವರಪ್ಪನಾಣೆ ಗೆಲ್ಲುತ್ತಾರೆಯೇ ಎಂಬುದನ್ನು ನೋಡಿಕೊಳ್ಳಲಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರವು ಈಗಾಗಲೇ ಸಿ.ಎಂ ಪಾಲಿಗೆ ಮುಗಿದ ಹಾಗಿದೆ. ಈಗ ಅವರ ಸೊಸೆಯನ್ನು ಪ್ರಚಾರಕ್ಕೆ ಕಳುಹಿಸಿ ಗೆಲ್ಲಬೇಕೆಂಬ ಪ್ರಯತ್ನ ನಡೆಸಿದ್ದಾರೆ. ಅದು ಸಾಧ್ಯವಾಗುವುದಿಲ್ಲ. ಬಾದಾಮಿಯಲ್ಲೂ ಜೆಡಿಎಸ್ ಅಭ್ಯರ್ಥಿಯೂ ಗೆಲುವು ನಿಶ್ಚಿತ ಎಂದರು.

ಚುನಾವಣೆ ಸಂದರ್ಭದಲ್ಲಿ ಜನರನ್ನು ಮರಳು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ, ನೇತ್ರಾವತಿ, ಹೇಮಾವತಿ ನದಿ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.