ADVERTISEMENT

ಗಂಗನಾಳು ಏತನೀರಾವರಿ: 4ರಂದು ಸಿ.ಎಂ. ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 9:12 IST
Last Updated 2 ಜನವರಿ 2018, 9:12 IST
ಅರಕಲಗೂಡು ತಾಲ್ಲೂಕು ಗಂಗಾನಾಳು ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಪರಿಶೀಲನೆಗೆ ಸಚಿವ ಎ.ಮಂಜು ಭಾನುವಾರ ಚಾಲನೆ ನೀಡಿದರು
ಅರಕಲಗೂಡು ತಾಲ್ಲೂಕು ಗಂಗಾನಾಳು ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಪರಿಶೀಲನೆಗೆ ಸಚಿವ ಎ.ಮಂಜು ಭಾನುವಾರ ಚಾಲನೆ ನೀಡಿದರು   

ಅರಕಲಗೂಡು: ಗಂಗನಾಳು ಏತನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಜ. 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.

ಭಾನುವಾರ ಏತ ನೀರಾವರಿ ಯೋಜನೆಯ ಪ್ರಾಯೋಗಿಕ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಮೂಲಕ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗುತ್ತಿದೆ’ ಎಂದು ಹೇಳಿದರು.

‘₹ 34 ಕೋಟಿ ವೆಚ್ಚದ ಈ ಯೋಜನೆ ಪೂರ್ಣಗೊಂಡರೆ ಕಸಬಾ ಮತ್ತು ದೊಡ್ಡಮಗ್ಗೆ ಹೋಬಳಿ ವ್ಯಾಪ್ತಿಯ 44 ಗ್ರಾಮಗಳ ವ್ಯಾಪ್ತಿಯ 92 ಕೆರೆಗಳಿಗೆ ನೀರು ಹರಿಯಲಿದೆ’ ಎಂದು ತಿಳಿಸಿದರು.

ADVERTISEMENT

ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. 20 ಗ್ರಾಮಗಳ 21 ಕೆರೆಗಳಿಗೆ ನೀರು ತುಂಬಿಸಲಾಗುವುದು. ಎರಡನೆ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಇದೂ ಮುಕ್ತಾಯವಾಗಲಿದೆ ಎಂದರು.

ಹೇಮಾವತಿ ನದಿಯಿಂದ ನೀರನ್ನು ಏತ್ತಿ 120 ದಿನಗಳ ಕಾಲ ಕೊಳವೆಗಳ ಮೂಲಕ ಹಾಯಿಸಿ ಕೆರೆಕಟ್ಟೆಗಳನ್ನು ತುಂಬಿಸುವ ಈ ಕಾಮಗಾರಿಗೆ ಮುಖ್ಯಮಂತ್ರಿ ಅವರು ಅಗತ್ಯ ಅನುದಾನ ನೀಡಿ, ತುರ್ತಾಗಿ ಕಾಮಗಾರಿ ಪೂರ್ಣಗೊಳ್ಳಲು ನೆರವಾಗಿದ್ದಾರೆ ಎಂದರು.

ಕಸಬಾ ಹೋಬಳಿಯ ಬೈಚನಹಳ್ಳಿ ಸುತ್ತಮುತ್ತಲ ಗ್ರಾಮಗಳ ಜನತೆಗೆ ಈ ಯೋಜನೆ ಜಾರಿಯಿಂದ ನೆರವಾಗಲಿದೆ. ಕೆರೆಕಟ್ಟೆಗಳಿಗೆ ನೀರು ಹರಿದು, ಅಂತರ್ಜಲದ ಮಟ್ಟ ಉತ್ತಮಗೊಳ್ಳಲಿದೆ. ಕೊಳವೆಬಾವಿಗಳು ಪುನಶ್ಚೇತನಗೊಳ್ಳಲಿವೆ. ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಅಧಿಕಾರಿಗಳೂ ಕೂಡಾ ಕಾಮಗಾರಿಯನ್ನು ಮುತುವರ್ಜಿ ವಹಿಸಿ ಶೀಘ್ರವಾಗಿ ಪೂರ್ಣಗೊಳಿಸಿದ್ದಾರೆ. ಈ ಯೋಜನೆಗಾಗಿ 16 ಎಕರೆ ಭೂಮಿಯನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಗುಂಟೆಗೆ ₹ 62 ಸಾವಿರದಂತೆ ಮಾರುಕಟ್ಟೆ ದರ ನೀಡಲಾಗಿದೆ ಎಂದು ವಿವರಿಸಿದರು.

ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಕೆಲ ರೈತರಿಗೆ ತೊಂದರೆಯಾಗಿದೆ. ಇದಕ್ಕಾಗಿ ಬೇಸರಿಸಬಾರದು. ಯೋಜನೆ ಜಾರಿ ಸಂದರ್ಭದಲ್ಲಿ ಕೆಲವರಿಗೆ ತೊಂದರೆಯಾಗುವುದು ಅನಿವಾರ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಅವರೇ ಉದ್ಘಾಟಿಸುತ್ತಿರವುದು ಸಂತಸಕರ ವಿಚಾರವಾಗಿದೆ ಎಂದರು. ಕಾವೇರಿ ನೀರಾವರಿ ನಿಗಮದ ಎಇಇ ಗಣೇಶ್‌, ಮುಖಂಡ ಶ್ರೀನಿವಾಸ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.