ADVERTISEMENT

ಅರಸೀಕೆರೆ: ಸಿ.ಎಂ ಭೇಟಿಗೆ ಸಿದ್ಧತೆ ಚುರುಕು

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 9:50 IST
Last Updated 3 ಜನವರಿ 2018, 9:50 IST

ಅರಸೀಕೆರೆ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.4ರಂದು ಅರಸೀಕೆರೆಗೆ ಭೇಟಿ ನೀಡುತ್ತಿದ್ದು, ವೇದಿಕೆ ನಿರ್ಮಾಣ ಸೇರಿ ಸಿದ್ಧತೆಗಳು ಚುರುಕುನಿಂದ ಸಾಗಿವೆ.

ನಗರದ ತಾಲ್ಲೂಕು ಕ್ರಿಡಾಂಗಣಕ್ಕೆ ಹೆಲಿಕಾಪ್ಟರ್‌ನಲ್ಲಿ ಅಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬರಲಿದ್ದು, ನೇರವಾಗಿ ಸಾಧನ ಸಂಭ್ರಮ ಸಮಾವೇಶ ನಡೆಯಲಿರುವ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ ವೇದಿಕೆಗೆ ಬರುವರು.

10 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಹಾಗೂ ವೇದಿಕೆ ಉಸ್ತುವಾರಿ ವಹಿಸಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಭೇಟಿ ನೀಡಿದ್ದಾಗ ನಗರದ ಜನತೆಗೆ ದಿನದ 24 ಗಂಟೆ ಹೇಮಾವತಿ ನದಿ ಮೂಲದ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.

ತೆಂಗು ಬೆಳೆಗಾರರ ಬಗ್ಗೆ ಪ್ರಸ್ತಾಪ: ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಪ್ರಮುಖವಾಗಿ ತೆಂಗು ಬೆಳೆಗಾರರ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನಸೆಳೆಯಲಾಗುವುದು ಎಂದು ತಿಳಿಸಿದರು.

ಮಳೆ ಅಭಾವದಿಂದ ಅಂತರ್ಜಲ ಕೊರತೆಯಿದೆ. ತೆಂಗಿನಮರಗಳು ಒಣಗಿ ಹೋಗಿವೆ. ಹವಾಮಾನ ಏರುಪೇರಿನಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬೆಳೆಗಾರರ ಹಿತ ರಕ್ಷಣೆ ಎಲ್ಲರ ಜವಾಬ್ದಾರಿ ಹಾಗಾಗಿ ಆರ್ಥಿಕ ತೊಂದರೆಯಲ್ಲಿರುವ ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ತೆಂಗು ಬೆಳೆಗಾರರ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಪ್ರಸ್ತಾಪಿಸಲಾಗಿದೆ. ಈಗ ಮುಖ್ಯಮಂತ್ರಿಗಳೇ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ಅವರ ಗಮನಸೆಳೆಯಲಾಗುವುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ತಾ.ಪಂ ಮಾಜಿ ಸದಸ್ಯ ಮುದುಡಿ ಗಂಗಾಧರ್‌, ಎಪಿಎಂಸಿ ಮಾಜಿ ಸದಸ್ಯ ರಾಮಚಂದ್ರ, ನಗರಸಭಾ ಸದಸ್ಯ ಮೋಹನ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.