ADVERTISEMENT

ಸಂಭ್ರಮದ ಬ್ರಹ್ಮರಥೋತ್ಸವ

ಬಸವಾಪಟ್ಟಣದಲ್ಲಿ ಉತ್ಸವ, ಅಸಂಖ್ಯ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:17 IST
Last Updated 26 ಜನವರಿ 2018, 10:17 IST

ಕೊಣನೂರು: ರಾಮನಾಥಪುರ ಹೋಬಳಿ ಬಸವಾಪಟ್ಟಣದ ಕೋಟೆ ಬೀದಿಯ ಐತಿಹಾಸಿಕ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಸಡಗರ, ಸಂಭ್ರಮಗಳಿಂದ ಬುಧವಾರ ನಡೆಯಿತು.

ಸುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ಹಿನ್ನಲೆಯಲ್ಲಿ ಕೆಲ ದಿನಗಳಿಂದ ಹಂಸ ವಾಹನೋತ್ಸವ, ಮಂಟಪೋತ್ಸವ, ಗರುಡೋತ್ಸವ, ಗಜವಾಹನೋತ್ಸವ, ಕಲ್ಯಾಣೋತ್ಸವ ನಡೆಸಲಾಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ಸೂರ್ಯ ಮಂಡಲೋತ್ಸವ, ವೇದಘೋಷ ಪೂರ್ವಕ ಕೃಷ್ಣಗಂಧೋತ್ಸವ ಇತ್ಯಾದಿ ಪೂಜಾ ವಿಧಾನಗಳನ್ನು ಸಲ್ಲಿಸಲಾಯಿತು. ನಂತರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತರ ಜಯಘೋಷಗಳ ನಡುವೆ ಮೆರವಣಿಗೆ ನಡೆಯಿತು.

ADVERTISEMENT

ರಥ ಬೀದಿಯಲ್ಲಿ ಗಣಪತಿ ದೇವಸ್ಥಾನ ವರೆಗೆ ಸಾಗಿದ ತೇರು ಸುಸೂತ್ರವಾಗಿ ಸ್ವಸ್ಥಾನಕ್ಕೆ ಮರಳಿತು. ತೇರು ಮುಂದೆ ಸಾಗುವಾಗ ವೇದಮಂತ್ರ ಪಠಿಸಿದರೆ, ರಸ್ತೆಉ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ರಥದತ್ತ ಹಣ್ಣು ದವನ ತೂರಿ ಭಕ್ತಿ ಅರ್ಪಿಸಿದರು.

ದೇವಸ್ಥಾನದಲ್ಲಿ ದೇವರ ಮೂಲವಿಗ್ರಹಕ್ಕೆ ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪುನೀತರಾದರು. ಮಕ್ಕಳ ಆಟಿಕೆ ವಸ್ತುಗಳು, ಮಂಡಕ್ಕಿ ಪುರಿ, ಸಿಹಿ ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.