ADVERTISEMENT

ವಿಶ್ವಕರ್ಮರ ಸಂಘಟನೆಗೆ ಮಠದ ಪಾತ್ರ ಅನನ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:25 IST
Last Updated 28 ಜನವರಿ 2018, 10:25 IST

ಅರಕಲಗೂಡು: ‘ವಿಶ್ವಕರ್ಮ ಸಮಾಜವನ್ನು ಒಗ್ಗೂಡಿಸಿ, ಸಮಾಜಗಳ ಮುಂಚೂಣಿಗೆ ತರುವ ಕಾರ್ಯದಲ್ಲಿ ಅರೇಮಾದನಹಳ್ಳಿ ವಿಶ್ವಕರ್ಮ ಪೀಠ ವಹಿಸುತ್ತಿರುವ ಪಾತ್ರ ಅತ್ಯಂತ ಶ್ಲಾಘನೀಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದರು.

ವಿಶ್ವಕರ್ಮ ಪೀಠದ ಮದಾದಿ ಜಗದ್ಗುರು ಸುಜ್ಞಾನ ಪ್ರಭು ಭಗವತ್ಪಾದರ 992ನೇ ಜಯಂತಿ ಮಹೋತ್ಸವ ಅಂಗವಾಗಿ ಶನಿವಾರ ಸಾಮೂಹಿಕ ಉಪನಯನ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಅವಕಾಶಗಳು ದೊರೆಯುವುದು ಆಕಸ್ಮಿಕ, ದೊರೆತ ಅವಕಾಶವನ್ನು ಬಳಸಿಕೊಂಡು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುವುದು ಆಗತ್ಯ ಎಂದು ಸಲಹೆ ಮಾಡಿದರು.

ADVERTISEMENT

ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು ಶಾಲೆಯಲ್ಲಿ ನನ್ನ ಸಹಪಾಠಿ. ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಅವಕಾಶ ನನ್ನದಾದರೆ, ಧಾರ್ಮಿಕ ಗುರುವಾಗಿ ಸಮಾಜ ತಿದ್ದುವ ಹೊಣೆ ಸ್ವಾಮೀಜಿಗೆ ದೊರೆತಿದೆ ಎಂದರು.

ಇವರ ಮಾರ್ಗದರ್ಶನದಲ್ಲಿ ನವೆಂಬರ್‌ನಲ್ಲಿ ರಾಮನಾಥಪುರದಲ್ಲಿ ಕಾವೇರಿ ಪುಷ್ಕರ ಸ್ನಾನ ಯಶಸ್ವಿ ಯಾಯಿತು. 12 ದಿನಗಳ ಕಾರ್ಯಕ್ರಮ ದಲ್ಲಿ 1.5ಲಕ್ಷ ಭಕ್ತರು ಭಾಗವಹಿಸಿದ್ದು, ಇದು ದಾಖಲೆಯಾಗಿದೆ ಎಂದರು. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಅಗತ್ಯವಾದ ಸಹಾಯ ದೊರಕಿಸಿ ಕೊಡುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರು, ‘ವಿಶ್ವಕರ್ಮ ಸಮಾಜ ಸ್ವಾವಲಂಬಿಯಾಗಿದೆ. ಸಮಾಜ ಶೈಕ್ಷಣಿಕವಾಗಿ ಮುಂದುವರೆದಾಗ ಅಭಿವೃದ್ದಿ ಸಾಧ್ಯ. ಈ ನಿಟ್ಟಿನಲ್ಲಿ ಮುಖಂಡರು ಆಸಕ್ತಿ ವಹಿಸಬೇಕು’ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು, ಸಮಾಜ ಸಂಘಟಿತವಾದ ಬಳಿಕ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಮಠ ಬೆಂಗಳೂರಿನಲ್ಲಿ ಧಾರ್ಮಿಕ ಕೇಂದ್ರ ತೆರೆಯುವ ಉದ್ದೇಶಿಸಿದೆ ಸಚಿವರು 5 ಎಕರೆ ಜಮೀನು ಕೊಡಿಸಿ ಕೊಡಲು ಮುಂದೆ ಬರಬೇಕು ಎಂದು ಕೋರಿದರು.

ಚಿಕ್ಕಬಳ್ಳಾಪುರ ನಂದಿ ಜ್ಞಾನಾನಂದಾಶ್ರಮದ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ, ಆನೆಗುಂದಿ ಸರಸ್ವತಿ ಪೀಠದ ಶ್ರೀನಿವಾಸ ಸ್ವಾಮೀಜಿ, ವಡ್ನಾಳು ಮಹಾ ಸಂಸ್ಥಾನ ಮಠದ ಅಭಿನವ ರೇಣುಕಾಚಾರ್ಯ ಸ್ವಾಮೀಜಿ, ಹಿರಿಯೂರು ಜ್ಞಾನಭಾಸ್ಕರ ಸ್ವಾಮೀಜಿ, ತಮಿಳುನಾಡಿನ ಬುದ್ದಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಸಚಿವ ಎಚ್.ಡಿ ರೇವಣ್ಣ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ವಿಶ್ವ ಕರ್ಮ ಸಮುದಾಯದ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶ್ರೀನಿವಾಸಾಚಾರ್ ಉಪಸ್ಥಿತರಿದ್ದರು.

ಸನ್ಮಾನ: ಸಮಾಜದ ವಿವಿಧ ಸಾಧಕರನ್ನು ಗೌರವಿಸಲಾಯಿತು. ಬೆಳಿಗ್ಗೆ ವಿಶ್ವಕರ್ಮ ಧ್ವಜಾರೋಹಣ, ವಿಶ್ವಬ್ರಹ್ಮ ಪೂಜೆ, ಸುಜ್ಞಾನ ಪ್ರಭು ಮಹಾ ಸ್ವಾಮೀಜಿಗಳ ಸಮಾಧಿ ಸನ್ನಿದಿಯಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.