ADVERTISEMENT

ಖಚಿತ ಮಾಹಿತಿ ಇಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 9:08 IST
Last Updated 3 ಫೆಬ್ರುವರಿ 2018, 9:08 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಹಾಸನ: ಮುಂದಿನ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಹಾಗೂ ಬಿಜೆಪಿ ನಡುವೆ ಒಳ ಒಪ್ಪಂದ ಆಗಿರುವ ಸುದ್ದಿ ಇನ್ನೂ ಖಚಿತವಾಗಿಲ್ಲ. ಆದರೂ ಈ ಬಗ್ಗೆ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ ಎಂದು ಸಂಸದ ಎಚ್‌.ಡಿ.ದೇವೇಗೌಡ ಇಲ್ಲಿ ಶುಕ್ರವಾರ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿ, ‘ಚುನಾವಣೆ ಗೆಲ್ಲಲು ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂಬುದು ನನ್ನ ಭಾವನೆ. ಉಭಯ ಪಕ್ಷಗಳ ನಡುವೆ ಒಳ ಒಪ್ಪಂದ ಕುರಿತು ಹೈದರಾಬಾದ್‌ನಲ್ಲಿರುವ ಓವೈಸಿಯವರೂ ನಿರಾಕರಣೆ ಮಾಡಿಲ್ಲ. ಉತ್ತರ ಪ್ರದೇಶ ಸೇರಿದಂತೆ ಅನೇಕ ಕಡೆ ಚುನಾವಣೆ ಗೆಲ್ಲಲು ಹಲವು ತಂತ್ರ ಮಾಡಿರುವ ಬಿಜೆಪಿಯವರು, ಅದೇ ಭಾವನೆಯಿಂದ ಇಲ್ಲೂ ಏನು ಬೇಕಾದರೂ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ ನಿಂದ ರೈತರಿಗೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಿಲ್ಲ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮೊದಲಾದ ಕಡೆಗಳಲ್ಲಿ ಸಾಲ ಮನ್ನಾ ಮಾಡುವುದಾಗಿ ಹಾಲಿ ರಾಷ್ಟ್ರ ಆಳುತ್ತಿರುವ ನಾಯಕರು ಹೇಳಿದ್ದರು. ಆದರೆ, ರಾಜ್ಯದಲ್ಲಿ ಕನಿಷ್ಠ ರೈತರು ಪಡೆದಿರುವ ಬ್ಯಾಂಕ್ ಬಡ್ಡಿಯನ್ನೂ ಮನ್ನಾ ಮಾಡಿಲ್ಲ. ಇಂಧನ ಬೆಲೆ ಸೇರಿದಂತೆ ಸಾಮಾನ್ಯ ಜನರಿಗೆ ಪೂರಕವಾಗುವ ಯಾವುದೇ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.