ADVERTISEMENT

6 ಆರೋಪಿಗಳ ಬಂಧನ

ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್ ಕಳವು ಯತ್ನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 4:24 IST
Last Updated 19 ಜೂನ್ 2022, 4:24 IST
ಬಂಧಿತ ಆರೋಪಿಗಳೊಂದಿಗೆ ಪೊಲೀಸ್ ಅಧಿಕಾರಿಗಳು.
ಬಂಧಿತ ಆರೋಪಿಗಳೊಂದಿಗೆ ಪೊಲೀಸ್ ಅಧಿಕಾರಿಗಳು.   

ಸಕಲೇಶಪುರ: ಮಂಗಳೂರು–ಬೆಂಗಳೂರು ನಡುವಿನ ಪೈಪ್‌ಲೈನ್‌ಗೆ ರಂಧ್ರ ಕೊರೆದು ಪೆಟ್ರೋಲ್‌ ಕಳ್ಳತನ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಗ್ರಾಮಾಂತರ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಹುರುಡಿ ಗ್ರಾಮದ ಕೇವಶಮೂರ್ತಿ, ಗಿರೀಶ್‌, ಹಾಸನ ತಾಲ್ಲೂಕಿನ ಯೋಗೀಹಳ್ಳಿ ಗ್ರಾಮದ ಸಚಿನ್‌, ಮಂಗಳೂರಿನ ಗೋಳಿಯಾರ್‌ ಗ್ರಾಮದ ಸಿರಾಜುದ್ದೀನ್‌, ಸುಳ್ಯ ತಾಲ್ಲೂಕಿನ ಅಡಿಯಾರ್ ಮನೆಮಜಲೂರು ಗ್ರಾಮದ ಧನಂಜಯ, ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರಿನ ಅಬ್ದುಲ್‌ ಹಕಿಂ ಬಂಧಿತ ಆರೋಪಿಗಳು.

ಪೆಟ್ರೋಲ್‌ ಕಳ್ಳತನ ಮಾಡಲು ಬಳಸಿದ್ದ ಒಂದು ಹಿಟಾಚಿ, ಜನರೇಟರ್‌, ವಾಲ್‌ ಪೈಪ್‌, ವೆಲ್ಡಿಂಗ್‌, ಟ್ರಿಲ್ಲಿಂಗ್ ಮಿಷನ್‌ಗಳು ಹಾಗೂ ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ: ಪೈಪ್‌ಲೈನ್ ಮಾರ್ಗದ 116.6 ಕಿ.ಮೀ.ನಲ್ಲಿ ಜೂ. 4 ರಂದು ರಾತ್ರಿ 10 ಗಂಟೆ ಸುಮಾರಿಗೆ ಪೈಪ್‌ಲೈನ್‌ ಅಗೆದು, ರಂಧ್ರ ಕೊರೆಯಲಾಗುತ್ತಿತ್ತು. ಪಿಎಂಬಿಎಚ್‌ಎಲ್‌, ಒಎನ್‌ಜಿಸಿ ಆಂಡ್ ಎಚ್‌ಪಿಸಿಎಲ್‌ ಕಂಪನಿ ರಕ್ಷಣಾ ವಿಭಾಗದಲ್ಲಿ ಅಲರಾಂ ಸೈರನ್ ಆಗಿದೆ. ಕೂಡಲೇ ರಾತ್ರಿ ಪಾಳಿಯ ಕಂಪನಿ ಅಧಿಕಾರಿಗಳು, ಸಿಬ್ಬಂದಿ ಬೆಳಿಗ್ಗೆ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದರು.

ADVERTISEMENT

ಹಿಟಾಚಿ ಹಾಗೂ ಇತರ ಯಂತ್ರಗಳನ್ನು ವಶಕ್ಕೆ ಪಡೆದು. ಪಿಎಂಬಿಎಚ್‌ಎಲ್ ಕಂಪನಿ ಅಧಿಕಾರಿಗಳು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಿಟಾಚಿ ಚಾಲಕ ಹಾಗೂ ಮಾಲೀಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಮುಖ ಆರೋಪಿಗಳ ಮಾಹಿತಿ ಲಭ್ಯವಾಗಿತ್ತು. ಇದೀಗ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸಗೌಡ, ಎಎಸ್ಪಿ ಡಾ.ನಂದಿನಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಚ್.ಆರ್.ಅನಿಲ್ ಕುಮಾರ್ ಉಸ್ತುವಾರಿಯಲ್ಲಿ ಇನ್‌ಸ್ಪೆಕ್ಟರ್ ಚೈತನ್ಯ, ಬಿ. ಬಸವರಾಜ್, ಶಿವಪ್ರಕಾಶ್, ಲೋಕೇಶ್, ಸುನೀಲ್, ಯಶವಂತ್, ಪೀರ್‌ಖಾನ್, ಧರ್ಮೇಂದ್ರ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಹುರುಡಿ ಗ್ರಾಮದಲ್ಲಿ ಈ ಹಿಂದೆಯೂ ಮೂರು ಬಾರಿ ಪೈಪ್‌ಲೈನ್‌ಗೆ ರಂಧ್ರ ಕೊರೆದ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಕೆಲವು ಆರೋಪಿಗಳು ಮತ್ತೆ ಈ ಕೃತ್ಯಕ್ಕೆ ಕೈ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.