ADVERTISEMENT

ಜೀತದಾಳುಗಳಿಗೆ ಪುನರ್ವಸತಿ: ₹71 ಲಕ್ಷ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ

ಸಾವಂಕನಹಳ್ಳಿ ತೋಟದಿಂದ ರಕ್ಷಿಸಲ್ಪಟ್ಟ ಜೀತದಾಳುಗಳು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 13:25 IST
Last Updated 22 ಡಿಸೆಂಬರ್ 2018, 13:25 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಹಾಸನ : ತಾಲ್ಲೂಕಿನ ದುದ್ದ ಹೋಬಳಿ ಸಾವಂಕನ ಹಳ್ಳಿಯಲ್ಲಿ ರಕ್ಷಿಸಲ್ಪಟ್ಟ ಜೀತದಾಳುಗಳಿಗೆ ನಿಯಮಾನುಸಾರ ₹ 71 ಲಕ್ಷ ಪರಿಹಾರ ಬಿಡುಗಡೆ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದೆ.

ಪುರುಷ ಜೀತ ಕಾರ್ಮಿಕರಿಗೆ ₹ 1 ಲಕ್ಷ ಹಾಗೂ ಮಹಿಳಾ ಕಾರ್ಮಿಕರಿಗೆ ತಲಾ ₹ 2 ಲಕ್ಷದಂತೆ ಪರಿಹಾರ ನೀಡಬೇಕಾಗಿದೆ. ಬಿಡುಗಡೆಯಾದ ಜೀತವಿಮುಕ್ತರಲ್ಲಿ 31 ಮಂದಿ ಪುರುಷ ಹಾಗೂ 16 ಮಂದಿ ಮಹಿಳೆಯರು ಮತ್ತು ನಾಲ್ಕು ಮಕ್ಕಳಿದ್ದಾರೆ. ಅದರಂತೆ ಮಹಿಳಾ ಕಾರ್ಮಿಕರಿಗೆ ₹ 32 ಲಕ್ಷ, ಪುರುಷರಿಗೆ ₹ 31 ಲಕ್ಷ, ಮಕ್ಕಳಿಗೆ ತಲಾ ₹ 2 ಲಕ್ಷದಂತೆ ₹ 8 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಬೇಕಾಗಿದೆ.

ಇದರಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿಗೆ ಪರಿಹಾರ ಧನ ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಶಿಫಾರಸ್ಸು ಮಾಡಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ.

ADVERTISEMENT

ಎಲ್ಲಾ ಜಿಲ್ಲಾಧಿಕಾರಿಗಳು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಆಯಾ ಜೀತ ವಿಮುಕ್ತ ವ್ಯಕ್ತಿಗಳಿಗೆ ಮುಂದುವರೆದ ಪುನರ್ ವಸತಿ ಕಾರ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಪತ್ರ ಬರೆಯುವಂತೆ ತಮ್ಮ ಪ್ರಸ್ತಾವನೆಯಲ್ಲಿ ಮನವಿ ಮಾಡಿದ್ದಾರೆ.

ಸಾವಂಕನಹಳ್ಳಿಯಲ್ಲಿ 51 ಮಂದಿ ರಕ್ಷಿತ ಜೀತದಾಳುಗಳಲ್ಲಿ 6 ಮಂದಿ ತುಮಕೂರು, ಒಬ್ಬರು ಬೆಳಗಾವಿ, ಇಬ್ಬರು ಶಿವಮೊಗ್ಗ, ಇಬ್ಬರು ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ 6 ಮಂದಿ, ಚಿಕ್ಕಮಗಳೂರಿನ ಜಿಲ್ಲೆಯ 6 ಮಂದಿ, ಹಾಸನ ಜಿಲ್ಲೆಯ 5 ಮಂದಿ, ಬಳ್ಳಾರಿಯ 1, ರಾಮನಗರ ಜಿಲ್ಲೆಯ 1, ಹಾವೇರಿ ಜಿಲ್ಲೆಯ 8, ಧಾರವಾಡ ಜಿಲ್ಲೆಯ 2, ಬೀದರ್‌ನ 1, ರಾಯಚೂರ್‌ನ 5, ವಿಜಯಪುರ ಜಿಲ್ಲೆಯ 1, ತೆಲಂಗಾಣದ ಒಬ್ಬರು, ಆಂಧ್ರ ಪ್ರದೇಶ ರಾಜ್ಯದ ಮೂವರು ಸೇರಿದ್ದಾರೆ. ಇದರಲ್ಲಿ 16 ವರ್ಷದೊಳಗಿನ 4 ಮಕ್ಕಳು ಇದ್ದು, ರಾಯಚೂರಿನ 1 ಹೆಣ್ಣು ಮತ್ತು 2 ಗಂಡು ಮಕ್ಕಳು ತಮ್ಮ ತಂದೆ ತಾಯಿ ಜೊತೆ ಚಿತ್ರದುರ್ಗ ಜಿಲ್ಲೆಯ 1 ಗಂಡು ಮತ್ತು ಪೊಷಕರೊಂದಿಗೆ ಇದ್ದರು.

ಪೊಲೀಸರಿಂದ ಜೀತದಾಳುಗಳ ರಕ್ಷಣೆ ನಂತರ ಎಲ್ಲರಿಗೂ ಅಟ್ಟಾವರ ಹೊಸಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು. ತಮ್ಮ ಸ್ವಗ್ರಾಮಗಳಿಗೆ ತೆರಳಲು ಬಯಸಿದ ಹಿನ್ನಲೆಯಲ್ಲಿ ಪ್ರಯಾಣ ವೆಚ್ಚಕ್ಕೆ ಹಣ ನೀಡಿ ಸುರಕ್ಷಿತವಾಗಿ ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.