ADVERTISEMENT

72 ಸೂಕ್ಷ್ಮ, 66 ಅತಿ ಸೂಕ್ಷ್ಮ ಮತಗಟ್ಟೆ

ಅರಸೀಕೆರೆ ವಿಧಾನ ಸಭಾ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:52 IST
Last Updated 10 ಏಪ್ರಿಲ್ 2013, 5:52 IST

ಅರಸೀಕೆರೆ: ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಬಿ.ಶಿವರಾಜ್ ಮಂಗಳವಾರ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 265 ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಈ ಪೈಕಿ 66 ಅತೀ ಸೂಕ್ಷ್ಮ, 72 ಸೂಕ್ಷ್ಮ, 127 ಸಾಮಾನ್ಯ ಮತಗಟ್ಟೆ ಎಂದು ಗುರುತಿ ಸ ಲಾಗಿದೆ. ಕ್ಷೇತ್ರದಲ್ಲಿ 1,87,886 ಮತದಾರ ರಿದ್ದಾರೆ. ಹೊಸದಾಗಿ 10,985 ಮತದಾರರು ಸೇರ್ಪಡೆ ಯಿಂದ ಒಟ್ಟು 1,98,871 ಮಂದಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ ಎಂದರು.

ಶಾಂತಿಯುತ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 1365 ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಭೆ ನಡೆಸಿ ಮಾಹಿತಿ ನೀಡ ಲಾಗಿದೆ. ಏ.24ರಂದು ಮೊದಲ ಹಂತದ ತರಬೇತಿ, ಏ.27ರಂದು 2ನೇ ಹಂತದ ತರಬೇತಿ ನಡೆಯಲಿದೆ ಎಂದರು.

ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆ ವಿವಿಧ ತಂಡ ರಚಿಸಲಾಗಿದೆ. ಚುನಾವಣೆ ಮುಗಿಯುವ ಅನುಮತಿ ಇಲ್ಲದೆ ಬ್ಯಾನರ್, ಬಂಟಿಂಗ್ಸ್ ಕಟ್ಟುವಂತಿಲ್ಲ. ಚುನಾವಣೆ ಉಸ್ತುವಾರಿ ವಹಿಸಿಕೊಂಡ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು. ಶಂಕಾಸ್ಪ ದವಾಗಿ ಓಡಾಡುವ ಜನರ ಮೇಲೆ ನಿಗಾ ಇಡುವಂತೆ ತಿಳಿಸಿದರು.

ತಾಲ್ಲೂಕಿನ ಗಡಿ ಭಾಗ, ಬಾಣಾವರ ಗಡಿಯಲ್ಲಿ, ಕಸಬಾ ಹೋಬಳಿ ಅಣ್ಣೇನಹಳ್ಳಿ ಗೇಟ್, ಬೊಮ್ಮಸಂದ್ರ ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗು ವುದು. ಇಲ್ಲಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುವುದು. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಬಳಸುವ ಕುರ್ಚಿ, ಧ್ವನಿವರ್ಧಕ, ವಾಹನಗಳ ಸಮರ್ಪಕ ಮಾಹಿತಿ ಹಾಗೂ ಅನುಮತಿಯನ್ನು ಚುನಾವಣಾ ಧಿಕಾರಿಯಿಂದ ಕಡ್ಡಾಯವಾಗಿ ಪಡೆಯ ಬೇಕು ಎಂದು ಅವರು ಹೇಳಿದರು.
ತಹಶೀಲ್ದಾರ್,  ಸಹಾಯಕ ಚುನಾವಣಾಧಿಕಾರಿ ಕೇಶವಮೂರ್ತಿ ಇತರರು ಇದ್ದರು.

ನೀತಿ ಸಂಹಿತೆ ಪಾಲನೆಗೆ ಸೂಚನೆ
ಬೇಲೂರು: `ಚುನಾವಣಾ ನೀತಿ ಸಂಹಿತೆಯನ್ನು ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಚುನಾವ ಣಾಧಿಕಾರಿ ಇಲಿಯಾ ಉಲ್ಲಾ ಷರೀಫ್ ಹೇಳಿದರು.

ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಮುಖಂಡರ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಅನುಷ್ಠಾನ ಸಂಬಂಧ ಆರು ಹೋಬಳಿಗಳಲ್ಲಿ ಸಂಚಾರಿ ವಿಚಕ್ಷಣಾ ದಳ ಕಾರ್ಯ ನಿರ್ವಹಿಸುತ್ತಿದೆ. ಈ ದಳದಲ್ಲಿ ತಾಲ್ಲೂಕು ಮಟ್ಟದ ಒಬ್ಬರು ಅಧಿಕಾರಿ, ಪೊಲೀಸ್ ಸಿಬ್ಬಂದಿ, ವಿಡಿಯೊಗ್ರಾಫರ್ ನೇಮಿಸಲಾಗಿದೆ. ಚುನಾವಣಾ ಸಭೆ ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ವಿಡಿಯೊ ಚಿತ್ರೀಕರಿಸಿ ತಾಲ್ಲೂಕು ಮಟ್ಟದ ವೀಕ್ಷಣಾ ತಂಡಕ್ಕೆ ಈ ತಂಡ ಮಾಹಿತಿ ನೀಡಲಿದೆ. ಗಡಿ ಪ್ರದೇಶಗಳಾದ ಚಿಕ್ಕಮಗಳೂರು ರಸ್ತೆ ಚನ್ನಾಪುರ ಮತ್ತು ಮೂಡಿಗೆರೆ ರಸ್ತೆ ಚೀಕನಹಳ್ಳಿ ಬಳಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.

ಮತದಾನ ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ನಡೆಯಲಿದೆ. ರಾಜಕೀಯ ಪಕ್ಷಗಳು ಪ್ರಚಾರ ಸಭೆ ನಡೆಸಲು ಅನುಮತಿ ಪಡೆಯುವುದು ಕಡ್ಡಾಯ. ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ  ಪ್ರಚಾರ ಮಾಡಬಹುದು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಸೇರಿದಂತೆ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಚುನಾವಣಾಧಿಕಾರಿ ಕಚೇರಿ ಯಿಂದ 200 ಮೀಟರ್ ದೂರದಲ್ಲಿ ವಾಹನ ನಿಲುಗಡೆ ಮಾಡಬೇಕು. ಏ.24 ಮತ್ತು 27ರಂದು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾ ಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ವಿಜಯ ಕುಮಾರ್, ತಹಶೀಲ್ದಾರ್ ರವಿಚಂದ್ರ ನಾಯಕ್, ಸಿಪಿಐ ಆರ್. ಶ್ರೀಕಾಂತ್, ಪಿಎಸ್‌ಐ ಅಶ್ವಿನ್ ಕುಮಾರ್, ಅಬಕಾರಿ ಪಿಎಸ್‌ಐ ನೂರ್ ಜಹಾರ್, ಪುರಸಭೆ ಮುಖ್ಯಾಧಿಕಾರಿ ಸುರೇಶ್‌ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT