ADVERTISEMENT

ಹಿರೀಸಾವೆ: ಹಳ್ಳಿ ಸೊಬಗಿನ ಜಾನಪದ ಸಂಭ್ರಮ

ಹಿರೀಸಾವೆ ಪ್ರಥಮ ದರ್ಜೆ ಕಾಲೇಜು ಪದವಿ ವಿದ್ಯಾರ್ಥಿಗಳಿಂದ ಆಚರಣೆ

ಹಿ.ಕೃ.ಚಂದ್ರು
Published 20 ಮಾರ್ಚ್ 2025, 5:01 IST
Last Updated 20 ಮಾರ್ಚ್ 2025, 5:01 IST
ತೆಂಗಿನ ಗರಿಗಳಿಂದ ಹಾಕಿದ್ದ ಚಪ್ಪರದ ಅಡಿಯಲ್ಲಿ ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ತೆಂಗಿನ ಗರಿಗಳಿಂದ ಹಾಕಿದ್ದ ಚಪ್ಪರದ ಅಡಿಯಲ್ಲಿ ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು   

ಹಿರೀಸಾವೆ: ವಿವಿಧ ಧಾನ್ಯಗಳಿಂದ ಬಿಡಿಸಿದ ರಂಗೋಲಿಗಳು, ಎತ್ತುಗಳ ಪಾದ ಪೂಜೆ, ರಾಗಿ ರಾಶಿ ಪೂಜೆ, ರಂಗದ ಕುಣಿತ ಸೇರಿದಂತೆ ಗ್ರಾಮಗಳಲ್ಲಿ ಆಚರಿಸುವ ಗ್ರಾಮ ದೇವರು, ದೇವತೆಗಳ ಹಬ್ಬದಂತೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವವನ್ನು ವಿದ್ಯಾರ್ಥಿಗಳು ಆಚರಿಸಿ, ಸಂಭ್ರಮಿಸಿದರು.

ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ, ಸಾಂಪ್ರದಾಯಿಕವಾಗಿ ಪುರುಷರು ಬಿಳಿ ಪಂಚೆ– ಅಂಗಿ, ಮಹಿಳೆಯರು ಸೀರೆಯ ಉಡುಗೆಗಳನ್ನು ತೊಟ್ಟಿದ್ದರು. ಮೊದಲಿಗೆ ಹಳ್ಳಿಕಾರ ತಳಿಯ ಎತ್ತುಗಳನ್ನು ಮೇಟಿಕೆರೆ ರಸ್ತೆ ಮೂಲಕ ಮೆರವಣಿಗೆಯಲ್ಲಿ ಕಾಲೇಜಿನ ಆವರಣಕ್ಕೆ ಕರೆತಂದರು. ವಿದ್ಯಾರ್ಥಿನಿಯರು ಆ ಎತ್ತುಗಳ ಪಾದಪೂಜೆ ಮಾಡಿದರು.

ಕಾಲೇಜು ಪ್ರಾಂಗಣದಲ್ಲಿ ತೆಂಗಿನ ಗರಿಗಳಿಂದ ಹಾಕಿದ್ದ ಚಪ್ಪರದ ಅಡಿಯಲ್ಲಿ ರಾಗಿ ರಾಶಿಗೆ ಅತಿಥಿಗಳು ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಭಾಗದ ಪ್ರಮುಖ ಜನಪದ ಕುಣಿತವಾದ ರಂಗದ ಕುಣಿತವನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮಟೆ ನಾದಕ್ಕೆ ಮೂವತ್ತು ನಿಮಿಷ ವಿವಿಧ ರೀತಿಯಲ್ಲಿ ಕುಣಿದರು.

ADVERTISEMENT

ವೇದಿಕೆಯ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ತಮ್ಮಣಗೌಡ ಮಾತನಾಡಿ, ಜನಪದ ಎಂದರೆ ನಮ್ಮ ದೇಶದ ಮೂಲ ಸಂಸ್ಕೃತಿ. ಅದನ್ನು ಗ್ರಾಮೀಣ ಪ್ರದೇಶದ ಜನರು ತಮ್ಮ ನಿತ್ಯದ ಕೆಲಸಗಳನ್ನು ಮಾಡುವ ಮೂಲಕ ಬೆಳೆಸಿದ್ದಾರೆ ಎಂದರು.

ಎಂಜಿನಿಯರ್ ಜೆ.ಇ. ನರೇಂದ್ರ ‘ಜಾನಪದ ವಿಹಾರ’ ವಿಷಯದ ಬಗ್ಗೆ ಮಾತನಾಡಿ, ಜನರಿಂದ ಜನರಿಗಾಗಿ ಜನರಿಗೋಸ್ಕರ ರಚನೆಯಾದ ಸಾಹಿತ್ಯ ಜನಪದ ಕಲೆಯಾಗಿದೆ. ಹಳ್ಳಿಯ ಹಬ್ಬ, ಮದುವೆ, ಭಕ್ತಿ ಪ್ರಧಾನ ಮತ್ತಿತರರು ಸಮಾರಂಭದಲ್ಲಿ ಜನರು ಹಾಡುವ ಮೂಲಕ ಮನರಂಜನೆ ನೀಡುತ್ತಿದ್ದರು ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್, ಕನ್ನಡ ಉಪನ್ಯಾಸಕಿ ಆಶಾ ಮಾತನಾಡಿದರು. ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು, ಸಿಬ್ಬಂದಿಗಳು ವಿದ್ಯಾರ್ಥಿಗಳ ಕೆಲಸಕ್ಕೆ ಸಹಕಾರ ನೀಡಿದ್ದರು. ಈ ಭಾಗದಲ್ಲಿ ಬೆಳೆಯುವ ವಿವಿಧ ಕಾಳುಗಳನ್ನು ಬಳಸಿ ಹಾಕಿದ್ದ ಹಲವು ಚಿತ್ರಗಳು ಕಾರ್ಯಕ್ರಮಕ್ಕೆ ಬಂದವರನ್ನು ಸ್ವಾಗತಿಸಿದ್ದವು.

ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಮಟೆ ನಾದಕ್ಕೆ ರಂಗಕುಣಿತ ಪ್ರದರ್ಶಿಸಿದರು
ಹಳ್ಳಿಕಾರ್ ತಳಿಯ ಎತ್ತುಗಳನ್ನು ತಂದು ಪಾದಪೂಜೆ ನೆರವೇರಿಸಿದರು
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬುದನ್ನು ನಮ್ಮ ಮಕ್ಕಳು ಜಾನಪದ ಉತ್ಸವದ ತೋರಿಸಿದ್ದಾರೆ. ಹಳ್ಳಿಯ ಸೊಬಗಿನ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸಿದರು.
ಲಕ್ಷ್ಮಣಗೌಡ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ
ವಿದ್ಯಾರ್ಥಿಗಳು ಅವರು ತಂದೆ ತಾಯಿ ಹಿರಿಯರು ಬಳಸುತ್ತಿದ್ದ ಪರಿಕರಗಳನ್ನು ತಂದಿಟ್ಟಿದ್ದಾರೆ. ರಾಸುಗಳು ರಾಗಿ ರಾಶಿ ಪೂಜೆ ಸೇರಿದಂತೆ ಎಲ್ಲ ಸಿದ್ಧತೆಯನ್ನು ವಿದ್ಯಾರ್ಥಿಗಳೇ ಮಾಡಿದ್ದಾರೆ
ಪ್ರೊ. ಮಂಜುನಾಥ್ ಕಾರ್ಯಕ್ರಮದ ಆಯೋಜಕ

ಗ್ರಾಮೀಣ ಸೊಗಡು

ಹಳ್ಳಿಗಳಲ್ಲಿ ರೈತಾಪಿ ಕುಟುಂಬದವರು ಬಳಸುತ್ತಿದ್ದ ಮದುವೆ ಬಿದಿರು ಪೆಟ್ಟಿಗೆ ಸೇರು ಪಾವು ಚಟಾಕು ಒಳಕಲ್ಲು ಒನಕೆ ರಾಗಿ ಬೀಸುವ ಕಲ್ಲು ತಕ್ಕಡಿ ನೇಗಿಲು ಜಾನುವಾರುಗಳಿಗೆ ಔಷಧಿ ಕುಡಿಸುವ ಗೊಟ್ಟ ವಂದರಿ ಕುಕ್ಕೆ ಮರ ಕಂಚು ಹಿತ್ತಾಳೆ ಮತ್ತು ಅಡುಗೆ ಮಣ್ಣಿನ ಪಾತ್ರೆಗಳು ಶಾವಿಗೆ ಮಣೆ ಸೇರಿದಂತೆ ಹಲವು ಪರಿಕರಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದು ಜೋಡಿಸಿ ಪ್ರರ್ದಶನ ಮಾಡಿದರು. ಬೆಳೆ ಒಬ್ಬಟ್ಟು ಹುಳಿ ಅನ್ನ ಹುರುಳಿ ಕಾಳು ಪಲ್ಯ ಅನ್ನ– ಸಾರಿನ ಅಡುಗೆಯನ್ನು ವಿದ್ಯಾರ್ಥಿಗಳು ಸ್ವತಃ ತಯಾರಿಸಿ ಎಲ್ಲರೂ ನೆಲದ ಮೇಲೆ ಕುಳಿತು ಸಾಮೂಹಿಕವಾಗಿ ಊಟು ಮಾಡಿದರು. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳು ಜಾನಪದ ಹಾಡು ನೃತ್ಯಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.