ADVERTISEMENT

ದೇಶದ ಪ್ರಗತಿಗೆ ಭದ್ರ ಬುನಾದಿ ಹಾಕಿದ ಮೇಧಾವಿ

ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನಾಚರಣೆಯಲ್ಲಿ ಅಮಿತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:01 IST
Last Updated 26 ಡಿಸೆಂಬರ್ 2025, 3:01 IST
ಹಾಸನದ ಬಿಜೆಪಿ ಕಚೇರಿಯಲ್ಲಿ ಗುರುವಾರ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪಾರ್ಪಣೆ ಮಾಡಿದರು.
ಹಾಸನದ ಬಿಜೆಪಿ ಕಚೇರಿಯಲ್ಲಿ ಗುರುವಾರ ಅಟಲ್‌ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪಾರ್ಪಣೆ ಮಾಡಿದರು.   

ಹಾಸನ: ಪಕ್ಷಕ್ಕಿಂತ ದೇಶ ಮುಖ್ಯ, ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುತ್ತ ನಿಸ್ವಾರ್ಥ, ಪಕ್ಷಾತೀತವಾಗಿ ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ಅವರು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸೇವೆ ಅವಿಸ್ಮರಣೀಯ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಹೇಳಿದರು.

ನಗರದ ಆರ್.ಸಿ. ರಸ್ತೆಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಜನ ಸಂಘದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರು, ಜನತಾ ಪಕ್ಷದ ಮೂಲಕ ಕ್ರಾಂತಿ ಮಾಡಿದರು. ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ ದೇಶಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ಮಾಡಿದರು. ಅವರ ನಿಸ್ವಾರ್ಥ ಸೇವೆ ಇಂದಿಗೂ ಆದರ್ಶವಾಗಿದೆ ಎಂದರು.

ADVERTISEMENT

ವಿಕಸಿತ ಭಾರತ ಎಂಬ ಪರಿಕಲ್ಪನೆಯ ಯೋಜನೆಯನ್ನು ಇಂದು ಪ್ರಧಾನಿ ಮೋದಿಯವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ವಾಜಪೇಯಿ ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆ ಬಗ್ಗೆ ಇಂದಿನ ಬಿಜೆಪಿ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಬೇಕು. ಅವರ ಆಡಳಿತ ಪ್ರಭಾವ ಇಂದಿಗೂ ಸ್ಮರಣೀಯವಾದದ್ದು. ದೇಶದ ಉತ್ತಮ ಭವಿಷ್ಯ ಹಾಗೂ ಶಕ್ತಿಯುತವಾಗಿ ಬೆಳೆಯಲು ಅವರು ಹಾಕಿಕೊಟ್ಟ ಬುನಾದಿ ಭದ್ರವಾಗಿದೆ ಎಂದರು.

ಪಕ್ಷಕ್ಕಾಗಿ ದುಡಿದ ಹಿರಿಯರಾದ ರಮೇಶ್ ಹಾಗೂ ಪ್ರೇಮ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ರೈತ ಮೋರ್ಚ ಜಿಲ್ಲಾ ಘಟಕದ ಅಧ್ಯಕ್ಷ ನಾರಾಯಣಗೌಡ, ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಹರ್ಷಿತ್, ಉಪಾಧ್ಯಕ್ಷ ಶೋಭನ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಚೆನ್ನಕೇಶವ, ನಾಗೇಶ್, ವೇದಾವತಿ, ದಯಾನಂದ, ಸುಮಾ, ಮಹೇಶ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.