ಬೇಲೂರು: ಬುದ್ಧ ಜಯಂತಿ ಅಂಗವಾಗಿ ತಾಲ್ಲೂಕು ಆಡಳಿತ, ಗಾಂಧಾರ ಬುದ್ಧ ವಿಹಾರ ಟ್ರಸ್ಟ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮೆರವಣಿಗೆ ಹಾಗೂ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಬುದ್ಧರ ತತ್ವ– ಸಿದ್ಧಾಂತಗಳನ್ನು ಅಳವಡಿಸಿಕೊಂಡು ಯಾರು ಜೀವನ ಸಾಗಿಸುತ್ತಾರೋ, ಅವರು ಉತ್ತಮ ಬದುಕು ರೂಪಿಸಿಕೊಳ್ಳುತ್ತಾರೆ. ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಪಾಲನೆ ಮಾಡಿದರೆ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಸಾಧ್ಯ’ ಎಂದರು.
‘ಆದರೆ, ಇಂದು ಶಾಂತಿ, ಸೌಹಾರ್ದ ಕಾಪಾಡುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ಪ್ರತಿಯೊಬ್ಬರೂ ಬುದ್ಧ, ಬಸವ, ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದರೆ ವಿಶ್ವದಲ್ಲಿ ಎಲ್ಲರೂ ಶಾಂತಿ, ನೆಮ್ಮದಿಯೊಂದಿಗೆ ಬದುಕಲು ಸಾಧ್ಯ’ ಎಂದರು.
‘ಪಂಚಶೀಲ ಹಾಗೂ ತ್ರಿಸರಣವನ್ನು ಬೋಧಿಸಿದ ಬೌದ್ಧ ಗುರು ಜ್ಞಾನ ಸಾಗರ ಬಂತೇಜಿ, ಗೌತಮ ಬುದ್ಧರ ಹುಟ್ಟು, ಜ್ಞಾನೋದಯ ಹಾಗೂ ಪರಿನಿಬ್ಬಾಣ ಹೊಂದಿದ ವಿಶೇಷ ದಿನವೇ ವೈಶಾಖ ಬುದ್ಧ ಪೂರ್ಣಿಮೆ. ಇದರೊಂದಿಗೆ ಭಗವಾನ್ ಬುದ್ಧರ ಶಾಸನವನ್ನು ಬೋಧಿಸಿ, ಜಗತ್ತಿನ ಪ್ರತಿಯೊಬ್ಬರಿಗೂ ಶಾಂತಿ, ಮೈತ್ರಿ, ಪ್ರೀತಿ, ಕರುಣೆಯನ್ನು ಬಯಸಿ, ರಾಜ್ಯ ಸರ್ಕಾರಕ್ಕೆ ಅಭಿನಂದನೆ’ ತಿಳಿಸಿದರು.
ಗುಣರತ್ನ ಬಂತೇಜಿ, ತಹಶೀಲ್ದಾರ್ ಎಂ.ಮಮತಾ, ಸಾಲುಮರದ ತಿಮ್ಮಕ್ಕ ಫೌಂಡೇಷನ್ ಅಧ್ಯಕ್ಷ ಬೆಳ್ಳೂರು ಉಮೇಶ್, ತಾಲ್ಲೂಕು ಪಂಚಾಯಿತಿ ಇಒ ವಸಂತ ಕುಮಾರ್, ಗಾಂಧಾರ ಬೌದ್ಧ ವಿಹಾರ ಟ್ರಸ್ಟ್ ಕಾರ್ಯದರ್ಶಿ ವಕೀಲ ರಾಜು, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ಎಲ್. ಲಕ್ಷ್ಮಣ್, ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ, ತಾಲ್ಲೂಕು ಕೆಡಿಪಿ ಸದಸ್ಯರಾದ ಜ್ಯೋತಿ, ನವೀನ್, ಉಪನ್ಯಾಸಕ ತಮ್ಮಣ್ಣಗೌಡ, ಮುಖಂಡರಾದ ಮಂಜುನಾಥ್, ಪರ್ವತಯ್ಯ, ಯೋಗೀಶ್, ಸ್ವಾಮಿ, ರಮೇಶ್, ಮಲ್ಲಿಕಾ, ರಘು, ಗಾಂಧಾರ ಬುದ್ಧ ವಿಹಾರದ ಗಂಗಾಧರ್, ಪ್ರವೀಣ್ ಬೌದ್ಧ, ಚಂದ್ರು, ಹರೀಶ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.