ಆಲೂರು: ’ವಿಶ್ವಕ್ಕೆ ಶಾಂತಿಮಂತ್ರವನ್ನು ಜಪಿಸಿದ ಗೌತಮ ಬುದ್ಧನ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಯಾವುದೇ ದ್ವೇಷ,ಅಸೂಯೆ, ನಿರಾಸೆಗಳಿಲ್ಲದೆ ಶಾಂತಿಯುತ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ’ ಎಂದು ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಆಲೂರು ತಾಲ್ಲೂಕು ಬೇಡಚವಳ್ಳಿ ಗ್ರಾಮದ ನಳಂದ ಬುದ್ಧ ವಿಹಾರ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬುದ್ಧ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ’ಗೌತಮ ಬುದ್ಧರು ರಾಜವಂಶದ ಮಗನಾಗಿ ಹುಟ್ಟಿ ಸಮಾಜದ ದ್ವೇಷ,ಅಸೂಯೆ,ವಾಮಾಚಾರ,ಅಶಾಂತಿ ಇವುಗಳಿಂದ ಮಾನವನ ಜೀವನ ಅಶಾಂತಿಯ ಕಡೆಗೆ ಮುಖ ಮಾಡಿದ್ದು ಇವುಗಳನ್ನು ಈ ಸಮಾಜದಿಂದ ತೊಡೆದು ಹಾಕಬೇಕು ಎಂಬ ಉದ್ದೇಶದಿಂದ ಪಂಚ ತತ್ವಗಳನ್ನ ಬೋಧಿಸಿದರು ಇವರು ಬೋಧಿಸಿದ ಪಂಚ ತತ್ವಗಳೆ ನಮ್ಮ ಭಾರತದ ಸಂವಿಧಾನದ ಪಂಚಶೀಲ ತತ್ವಗಳಾಗಿ ಅಳವಡಿಕೆಯಾಗಿದೆ’ ಎಂದರು.
’ಬೌದ್ಧ ಧರ್ಮವು ವಿಶ್ವದಲ್ಲಿಯೇ ಹೆಚ್ಚು ಪ್ರಚಲಿತವಿರುವ ಧರ್ಮ ವಾಗಿದ್ದು ಅಂದಿನ ಕಾಲದಲ್ಲಿಯೇ ಅಶೋಕ ಚಕ್ರವರ್ತಿಯು ಈ ಧರ್ಮವನ್ನು ಸ್ವೀಕರಿಸುವ ಜೊತೆಗೆ ಹೆಚ್ಚು ಪ್ರಚಾರಪಡಿಸಿದರು ಎಂಬ ಇತಿಹಾಸವಿದೆ.ನಂತರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಕೂಡ ಬೌದ್ಧ ಧರ್ಮವನ್ನು ಸ್ವೀಕರಿಸಿ ಬೌದ್ಧ ಧರ್ಮದ ಪ್ರಚಾರವನ್ನು ಕೂಡ ಮಾಡಿದಂತಹ ಇತಿಹಾಸವಿದೆ’ ಎಂದು ತಿಳಿಸಿದರು.
ನ್ಯಾನಲೋಕ ಬಂತೇಜೀ ಅವರು ಮಾತನಾಡಿ ’ವಿಶ್ವದಲ್ಲಿ ಶಾಂತಿಮಂತ್ರವನ್ನ ಬೋಧಿಸುವ ಯಾವುದಾದರೂ ಧರ್ಮವಿದ್ದರೆ ಅದು ಬೌದ್ಧ ಧರ್ಮ. ಮಾನವನು ಪ್ರಸ್ತುತ ದಿನಗಳಲ್ಲಿ ದುಃಖವನ್ನ ಅನುಭವಿಸುತ್ತಿದ್ದಾನೆ ಎಂದರೆ ಅದಕ್ಕೆ ಮೂಲ ಕಾರಣ, ಆಸೆ ಮತ್ತು ಅತಿ ಆಸೆ ಗೌತಮ ಬುದ್ಧರು ಮಾನವನ ಶಾಂತಿಯಿಂದ ನೆಮ್ಮದಿಯಿಂದ ಬದುಕಬೇಕೆಂದರೆ ಆಸೆಯೇ ದುಃಖಕ್ಕೆ ಮೂಲ ಕಾರಣ ಆಸೆಯನ್ನು ತ್ಯಜಿಸಿದರೆ ದುಃಖವೂ ದೂರವಾಗುತ್ತದೆ ಎಂಬ ತತ್ವವನ್ನು 2 ಸಾವಿರ ವರ್ಷಗಳ ಹಿಂದೆಯೇ ತಿಳಿಸಿದ್ದರು ಎಂದು ಸ್ಮರಿಸಿದ ಅವರು ಗೌತಮ ಬುದ್ಧರ ಆದರ್ಶಗಳನ್ನ ನಾವೆಲ್ಲರೂ ಮೈಗೂಡಿಸಿಕೊಂಡರೆ ಇಡೀ ವಿಶ್ವವೇ ಶಾಂತಿ ಪ್ರಿಯ ರಾಷ್ಟ್ರವಾಗಿ ವಿಶ್ವದ ಎಲ್ಲ ಜನರು ಶಾಂತಿ ನೆಮ್ಮದಿಯಿಂದ ಬದುಕಬಹುದು’ ಎಂದರು.
ಕಾರ್ಯಕ್ರಮದಲ್ಲಿ ಬೌದ್ಧ ಬಂತೆಜೀ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ,ಬೌದ್ಧ ವಿಹಾರ ಟ್ರಸ್ಟ್ ನ ಅಧ್ಯಕ್ಷ ಕೆ.ಬಿ ಗುರುಮೂರ್ತಿ,ದ.ಸಂ.ಸ ರಾಜ್ಯ ಘಟಕದ ಸಂಚಾಲಕ ಕೆ.ಈರಪ್ಪ, ದೇವರಾಜು, ನಿವೃತ್ತ ಶಿಕ್ಷಕ ನಿರ್ವಾಣಯ್ಯ, ಶಿಕ್ಷಕ ವಾಸುದೇವ್, ರಘುನಾಥ್,ಗೇಕರವಳ್ಳಿ ಬಸವರಾಜು,ಮಂಜುನಾಥ್, ರವಿ ಬೇಡಚವಳ್ಳಿ, ಬಸವಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.