ADVERTISEMENT

‘ಮುಸ್ಲಿಮರ ಧಾರ್ಮಿಕ ಆಸ್ತಿ ಕಬಳಿಸುವ ತಂತ್ರ’

ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಸಮಾವೇಶ: ವಕ್ಫ್ ತಿದ್ದುಪಡಿ ಕಾಯ್ದೆ ಹಿಂಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:53 IST
Last Updated 3 ಮೇ 2025, 14:53 IST
ಹಾಸನದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು
ಹಾಸನದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು   

ಹಾಸನ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಪ್ರತಿಭಟನಾ ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ ಅಬ್ದುಲ್ ಹನ್ನಾನ್, ‘ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದಿರುವುದು ಮುಸ್ಲಿಮರ ಧಾರ್ಮಿಕ ಆಸ್ತಿ ಕಬಳಿಸುವ ತಂತ್ರವಾಗಿದೆ. ಕೂಡಲೇ ಈ ಕಾಯ್ದೆ ರದ್ದು ಮಾಡಬೇಕು ಇಲ್ಲವೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಇಸ್ಲಾಂ ಕಾನೂನಿನ್ವಯ ವಕ್ಫ್‌ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಪೂರ್ವಜರು ಅರ್ಪಿಸಲಾದ ಆಸ್ತಿಯಾಗಿದೆ. ವಕ್ಫ್‌ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡಜನರ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ಇದನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ’ ಎಂದು ದೂರಿದರು.

ADVERTISEMENT

‘ವಕ್ಫ್‌ ತಿದ್ದುಪಡಿ ಕಾಯ್ದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಅಲ್ಪಸಂಖ್ಯಾತರನ್ನು ಅವಮಾನಿಸಲು, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಸಮಾಜವನ್ನು ವಿಭಜಿಸುವ ಗುರಿ ಹೊಂದಿರುವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರಪತಿ ವಾಪಸ್ ಕಳಿಸುವಂತೆ’ ಒತ್ತಾಯಿಸಿದರು.

‘ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಮುಸ್ಲಿಮರ ವಿರೋಧಿ ಆಡಳಿತ ನಡೆಸುತ್ತಿದೆ. ದೇಶದಾದ್ಯಂತ ಈ ಬಗ್ಗೆ ತೀವ್ರ ವಿರೋಧ ಇದ್ದರೂ, ಒತ್ತಾಯ ಪೂರ್ವಕವಾಗಿ ಈ ಮಸೂದೆ ಜಾರಿಗೆ ಕೇಂದ್ರ ಮುಂದಾಗಿರುವುದು ಮುಸ್ಲಿಂ ಸಮುದಾಯಕ್ಕೆ ಮಾಡಿದ ದ್ರೋಹ. ಕೂಡಲೇ ಮಸೂದೆಗೆ ಜಾರಿಗೆ ತಡೆ ಹಾಕಬೇಕು. ಸುಪ್ರೀಂಕೋರ್ಟ್ ನ್ಯಾಯ ನೀಡಬೇಕು. ಇಲ್ಲದಿದ್ದರೆ ಮುಂದೆಯೂ ಕೇಂದ್ರದ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು’ ಎಚ್ಚರಿಸಿದರು.

ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು ‘ಸಾರೇ ಜಹಾಂ ಸೇ ಅಚ್ಛಾ’ ಗೀತೆಯನ್ನು ಹಾಡಿದರು. ಮುಫ್ತಿ ಇದ್ರೀಸ್ ಅಹಮದ್ ಸಾಬ್ ಮತ್ತು ಇಮ್ರಾನ್ ಖಾದ್ರಿ ಪ್ರಾರ್ಥಿಸಿದರು. ಆಮೀರ್ ಜಾನ್ ಸ್ವಾಗತಿಸಿದರು. ನೌಷಾದ್ ಪಾಳ್ಯ ನಿರೂಪಿಸಿದರು.

ಮುಫ್ತಿ ಝುಬೈರ್ ಸಾಬ್, ಮುಖ್ಯ ಅತಿಥಿಗಳಾದ ರಾ.ಚಿಂತನ್, ಹಾಫಿಜ್ ಸೂಫಿಯಾನ್ ಸಾಕ್ಅಫಿ, ಮುಸ್ಲಿಂ ಸಂಘಟನೆಗಳ ಜಿಲ್ಲಾ ಒಕ್ಕೂಟದ ಅಕ್ರಮ್ ಖಾನ್, ಅಮೀರ್ ಜಾನ್, ಯೂಸುಫ್, ಫೈರೋಜ್ ಪಾಷಾ, ಸೈಯ್ಯದ್ ಅನ್ಸಾರ್, ಅಂಶದ್ ಪಾಳ್ಯ, ಪ್ರಗತಿಪರ ಹೋರಾಟಗಾರ ಮರಿ ಜೋಸೆಫ್, ದಲಿತ ಸಂಘರ್ಷ ಸಮಿತಿ ಸದಸ್ಯ ಸಂದೇಶ್, ಸಿಐಟಿಯುನ ಧರ್ಮೇಶ್, ಮುಫ್ತಿ ಅಝರುಲ್ಲ ಕಾಶ್ಮೀ ಸಾಬ್, ಅಬ್ದುಲ್ ರಹಮಾನ್ ಸಾಕ್ಅಫಿ, ಸಮೀರ್ ಖಾನ್, ಹಾಫೀಜ್ ಫಾರೂಕ್ ಅಹಮದ್ ಸಾಬ್, ಅಯ್ಯುಬ್ ನವೀದ್, ಇಸ್ಮಾಯಿಲ್, ಹಾಗೂ ಹಾಸನದ ಎಲ್ಲ ಮಸೀದಿ, ಮದ್ರಸಗಳ ಇಮಾಮರು, ಉಸ್ತಾದರು, ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಕಾಯ್ದೆ ಸಂವಿಧಾನಾತ್ಮಕ ಹಕ್ಕುಗಳ ವಿರುದ್ಧವಾಗಿದ್ದು ಮುಸ್ಲಿಂ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂಥದ್ದಾಗಿದೆ. ಸಮುದಾಯದ ಧಾರ್ಮಿಕ ಶೈಕ್ಷಣಿಕ ಮತ್ತು ಸಾಮಾಜಿಕ ಹಕ್ಕುಗಳ ಮೇಲಿನ ಆಕ್ರಮಣವಾಗಿದೆ.
–ಮೌಲ್ವಿ ನಾಸಿರ್ ಹುಸೇನ್, ಧರ್ಮಗುರು

ಪ್ರಮುಖ ಬೇಡಿಕೆಗಳು

  • ವಕ್ಫ್ ತಿದ್ದುಪಡಿ ಕಾಯ್ದೆ–2025 ಅನ್ನು ತಕ್ಷಣ ವಾಪಸ್‌ ಪಡೆಯಬೇಕು.

  • ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗುವ ಯಾವುದೇ ವಿಧಿಯನ್ನು ಜಾರಿ ಮಾಡಬಾರದು.

  • ಮುಸ್ಲಿಮರ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

  • ಮುಸ್ಲಿಂ ಸಮುದಾಯದ ಅಭ್ಯುದಯಕ್ಕಾಗಿ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ಯೋಜನೆಗಳನ್ನು ರೂಪಿಸಬೇಕು.

  • ಪಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕು.

  • ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ವಿಷಯ ಹರಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.