
ಹಾಸನ: ಜಾನಪದ ಕಲೆಗಳ ಲೋಕದಲ್ಲಿ, ವಿಶೇಷವಾಗಿ ತತ್ವಪದ, ಗೀಗೀ ಪದ, ಲಾವಣಿ ಹಾಗೂ ಭಜನೆ ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಕಲಾವಿದರಲ್ಲಿ ಯೋಗೇಂದ್ರ ದುದ್ದ ಪ್ರಮುಖರು.
ದುದ್ದ ಗ್ರಾಮದ ಯೋಗೇಂದ್ರ, ಈ ಪ್ರದೇಶದ ಜನಪದ ಪರಂಪರೆಯನ್ನು ರಾಜ್ಯಮಟ್ಟಕ್ಕೆ ತಲುಪಿಸಿದ ಕಲಾವಿದರೆಂದು ಗುರುತಿಸಿಕೊಂಡಿದ್ದಾರೆ. ಅವರು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ತತ್ವಪದ ಗಾಯಕರಾಗಿ ಅಪಾರ ಜನಪ್ರಿಯತೆ ಪಡೆದಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿರುವ ಲಾವಣಿ ಗಾಯನ ಶೈಲಿಯಲ್ಲಿ ಇವರಿಗೆ ವಿಶಿಷ್ಟ ಪಕ್ವತೆ ಇದೆ. ಹಾಸ್ಯ, ವ್ಯಂಗ್ಯ, ಸಾಮಾಜಿಕ ವಿಡಂಬನೆ, ಭಕ್ತಿ, ವೀರ ಮತ್ತು ಶೃಂಗಾರ ರಸಗಳ ಮಿಶ್ರಣವಿರುವ ಇವರ ಲಾವಣಿ ಪದಗಳು ಜನಮನ ತಲುಪುವ ಶಕ್ತಿಯುತ ಅಭಿವ್ಯಕ್ತಿ ರೂಪಗಳಾಗಿವೆ.
ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಹಾಸನ ತಾಲ್ಲೂಕಿನ ದುದ್ದ ಬೂದೇಶ್ವರ ಮಠದಲ್ಲಿ ನಡೆಯುವ ಭಜನೆ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಇವರ ಮನೆ ಸಮೀಪದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿಯೂ ಭಜನೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
2007ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಜನಪದ ಹಾಡುಗಾರಿಕೆ ಕಾರ್ಯಕ್ರಮದಲ್ಲಿ ಇವರ ಬೂದೇಶ್ವರ ಕಲಾ ಸಂಘದ ಪ್ರದರ್ಶನ ಗಮನ ಸೆಳೆದಿತ್ತು. ಈ ವೇಳೆ ಶಂಕರಾನಂದ ಯೋಗೀಶ್ವರ ವಿರಚಿತ ಕೈವಲ್ಯ ನವನೀತ ಕೃತಿಯಿಂದ ಆಯ್ದ ಭಕ್ತಿ ಪಂಚರತ್ನ ಗೀತೆಗಳನ್ನು ಆಯಾಯ ರಾಗ-ತಾಳದಲ್ಲಿ ಗಾಯನ ಮಾಡಿದುದು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
15ನೇ ವಯಸ್ಸಿನಲ್ಲೇ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಯೋಗೇಂದ್ರ, ಇಂದು ಇಳಿವಯಸ್ಸಿನಲ್ಲಿಯೂ ಅದೇ ಉತ್ಸಾಹದಿಂದ ಕಲಾ ಸೇವೆ ಮುಂದುವರೆಸುತ್ತಿದ್ದಾರೆ. ಸಿದ್ಧಾರೂಢ ಗುರುಗಳ ಮೇಲೆ ರಚಿಸಲಾದ ತತ್ವಪದಗಳನ್ನು ವಿಶಿಷ್ಟವಾಗಿ ಹಾಡುವ ಮೂಲಕ ಜನಮನ ಸೆಳೆದಿದ್ದಾರೆ. ‘ಎಲ್ಲಿಂದ ನೀ ಬಂದೆ, ಅಲ್ಲಿಂದ ಏನ್ ತಂದೆ’ ಎಂಬ ತತ್ವಪದವು ಬದುಕಿನ ಸಾರವನ್ನು ಹೊತ್ತಿರುವ ಹಾಡಾಗಿ ವಿಶೇಷ ಮೆಚ್ಚುಗೆ ಪಡೆದಿದೆ.
ಇವರ ಕಂಚಿನ ಕಂಠಸಿರಿಯಿಂದ ಹಾಡುವ ಚೌಡಿಕೆ ಪದಗಳು ಸಾರ್ವಜನಿಕ ವೇದಿಕೆಗಳಲ್ಲಿ ವಿಶೇಷ ಪ್ರಭಾವ ಮೂಡಿಸಿವೆ. ಇತ್ತೀಚೆಗೆ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಎನ್‌ಎಸ್‌ಎಸ್ ಶಿಬಿರದಲ್ಲಿಯೂ ಇವರ ಗಾಯನ ಜನಮನ ಗೆದ್ದಿತ್ತು.
ಜನಪದ ಕಲೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಹಾಸನ ಜಿಲ್ಲಾಡಳಿತವು 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿದ್ದು, ಸನ್ಮಾನಗಳ ಪಟ್ಟಿ ದೀರ್ಘವಾಗಿದೆ. ಇದೀಗ ಜಾನಪದ ಅಕಾಡೆಮಿಯ 2025 ರ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಂದೆಯೇ ಮೊದಲ ಗುರು
1957 ರ ಅಕ್ಟೋಬರ್ 12ರಂದು ಜನಿಸಿದ ಯೋಗೇಂದ್ರ ಅವರಿಗೆ ಜನಪದ ಕಲೆಯ ಮೊದಲ ಗುರು ಎಂದರೆ ಅವರ ತಂದೆ ಜಿ. ಹೊಂಗ್ಯಪ್ಪ. ಹೊಂಗ್ಯಪ್ಪ ಅವರು ದುದ್ದ ಗ್ರಾಮದ ಕರಿ ಬೀರೇಶ್ವರ ದೇವಸ್ಥಾನದ ಪೂಜಕರಾಗಿದ್ದು ಜೊತೆಗೆ ಹೆಸರಾಂತ ತತ್ವಪದ ಗಾಯಕರಾಗಿದ್ದರು. ನೂರಾರು ಶಿಷ್ಯರಿಗೆ ತತ್ವಪದ ಬೋಧನೆ ನೀಡಿ ಹಾಡಿನ ಅರ್ಥ ವಿವರಣೆ ಮಾಡುತ್ತಾ ಕಲೆಯನ್ನು ಬೆಳೆಸಿದವರು. ಬಾಲ್ಯದಿಂದಲೇ ತಂದೆಯ ಜೊತೆಗಿದ್ದು ಕಲೆಯ ವಾತಾವರಣದಲ್ಲಿ ಬೆಳೆದ ಯೋಗೇಂದ್ರ ಅವರಿಗೆ ತಂದೆಯೇ ಗುರು ಎಂಬುದು ವಿಶೇಷ. ತಂದೆಯಿಂದ ಗುರುಬೋಧನೆ ಪಡೆದ ಯೋಗೇಂದ್ರ ದೇವಾಲಯಗಳಲ್ಲಿ ಭಜನೆ ಹಾಗೂ ತತ್ವಪದ ಗಾಯನ ಮಾಡುತ್ತ ತಮ್ಮ ಕಲಾ ಬದುಕನ್ನು ರೂಪಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.