ADVERTISEMENT

ಸಕಲೇಶಪುರ | ಮನೆ, ಶಾಲಾ ಆವರಣಕ್ಕೆ ನುಗ್ಗಿದ ಬಸ್‌: ವ್ಯಕ್ತಿ ಸಾವು

ಆಕ್ಸಲ್‌ ತುಂಡಾದ ಪರಿಣಾಮ ಅಪಘಾತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 13:59 IST
Last Updated 4 ಫೆಬ್ರುವರಿ 2024, 13:59 IST
ಸಕಲೇಶಪುರದ ಬಾಗೆ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯ ಕಾಂಪೌಡ್ ಜಖಂಗೊಳಿಸಿ ಒಳ ನುಗ್ಗಿರುವುದು
ಸಕಲೇಶಪುರದ ಬಾಗೆ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಜೆಎಸ್‌ಎಸ್‌ ಪಬ್ಲಿಕ್ ಶಾಲೆಯ ಕಾಂಪೌಡ್ ಜಖಂಗೊಳಿಸಿ ಒಳ ನುಗ್ಗಿರುವುದು   

ಸಕಲೇಶಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಆಕ್ಸಲ್‌ ತುಂಡಾದ ಪರಿಣಾಮ ಹೆದ್ದಾರಿ ಪಕ್ಕದ ಮನೆ, ಶಾಲಾ ಕಾಂಪೌಂಡ್‌ಗೆ ವಾಹನ ನುಗ್ಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಬಾಗೆ ಗ್ರಾಮದ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದೆ.

ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದ ಅಮೃತ್‌ರಾಜ್‌ (34) ಮೃತಪಟ್ಟವರು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್‌ ಹೆದ್ದಾರಿಯ ಪಕ್ಕದ ದಿವಾಕರ್ ಅವರ ತೋಟದ ಕಾರ್ಮಿಕರ ಮನೆ, ಜೆಎಸ್‌ಎಸ್‌ ಪಬ್ಲಿಕ್ ಶಾಲೆಯ ಕಾಂಪೌಡ್‌ ಜಖಂಗೊಳಿಸಿ ಸುಮಾರು 200 ಅಡಿ ದೂರ ಶಾಲಾ ಆವರಣದೊಳಗೆ ನುಗ್ಗಿದೆ. ಎರಡು ಮರಗಳಿಗೆ ಡಿಕ್ಕಿ ಹೊಡೆದಿದೆ.

ಮರಗಳು ಇಲ್ಲದಿದ್ದರೆ, ಶಾಲೆಯ ಹಾಸ್ಟೆಲ್‌ಗೆ ನೇರವಾಗಿ ನುಗ್ಗಿ ಮತ್ತಷ್ಟು ಸಾವು– ನೋವು ಸಂಭವಿಸುವ ಸಾಧ್ಯತೆ ಇತ್ತು. ಭಾನುವಾರ ಅದರಲ್ಲೂ ಮುಂಜಾನೆ ಯಾರೂ ಇರಲಿಲ್ಲ. ಬಸ್‌ ನುಗ್ಗಿದ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ಮೂವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಈ ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರಿಗೂ ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ ಡಿಕ್ಕಿ ಹೊಡೆದ ಪರಿಣಾಮ ಬಾಗೆ ಸಮೀಪ ದಿವಾಕರ್ ಎಂಬುವರ ತೋಟದ ಕಾರ್ಮಿಕರ ಮನೆಯ ಗೋಡೆ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.