ಅರಕಲಗೂಡು: 2025-26ನೇ ಸಾಲಿಗೆ ಎಸ್ಎಫ್‌ಸಿ ಮುಕ್ತ ನಿಧಿಯಡಿ ಶೇ 29, ಶೇ 7.25 ಹಾಗೂ ಶೇ 5ರ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಸೋಮವಾರ ನಡೆದ ಪಟ್ಟಣ ಪಂಚಾಯಿತಿ ವಿಶೇಷ ಸಭೆಯಲ್ಲಿ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಒಪ್ಪಿಗೆ ನೀಡಲಾಯಿತು.
ಎಸ್ಎಫ್‌ಸಿ ಮುಕ್ತ ನಿಧಿಯಲ್ಲಿ ₹14 ಲಕ್ಷ ಬಿಡುಗಡೆಯಾಗಿದ್ದು, ಇದಕ್ಕೆ ಅಗತ್ಯವಾದ ಹಾಗೂ ಪಟ್ಟಣ ಪಂಚಾಯಿತಿ ನಿಧಿಯಡಿ ಬರುವ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ನಿರ್ಧರಿಸಲಾಯಿತು. 15ನೇ ಹಣಕಾಸು ಯೋಜನೆಯಡಿ ₹88 ಲಕ್ಷ ಬಿಡುಗಡೆಯಾಗಿದ್ದು, ಎಲ್ಲಾ ವಾರ್ಡ್‌ಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜತೆಗೆ ₹2 ಲಕ್ಷ ವೆಚ್ಚದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಭೆ ನಿರ್ಧರಿಸಿತು.
ವಿಶೇಷ ಚೇತನ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚ ಭರಿಸಲು ₹1.65 ಲಕ್ಷವನ್ನು ಸಹಾಯಧನಕ್ಕಾಗಿ ನಿಗದಿ ಪಡಿಸಿದ್ದು, ಮಾರ್ಚ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಇಬ್ಬರು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳ ಆಯ್ಕೆಗೆ ಸಭೆ ಒಪ್ಪಿಗೆ ಸೂಚಿಸಿತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ, ಅದನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಲು ಕ್ರಿಯಾ ಯೋಜನೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕೃಷ್ಣಯ್ಯ ಆಗ್ರಹಿಸಿದರು.
ರಸ್ತೆ, ವಿದ್ಯುತ್, ಕುಡಿಯುವ ನೀರು ಮುಂತಾದ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವಂತೆ ಸದಸ್ಯರಾದ ಹೂವಣ್ಣ, ರಮೇಶ್ ವಾಟಾಳ್ ಸಲಹೆ ಮಾಡಿದರು.
ಪಟ್ಟಣ ಪಂಚಾಯಿತಿಗೆ ಸೇರಿದ 33 ಮನೆಗಳ ವಿವಾದ ನ್ಯಾಯಾಲಯದ ಮುಂದೆ ಬಂದು ದಶಕಗಳೆ ಕಳೆದಿವೆ. ಯಾವುದೇ ನಿರ್ಧಾರವಾಗಿಲ್ಲ. ಕೋರ್ಟ್ ಮತ್ತು ವಕೀಲರ ವೆಚ್ಚಕ್ಕಾಗಿ ಹಣ ವ್ಯಯವಾಗುತ್ತಿದೆ. ಅಧ್ಯಕ್ಷರು ಗಮನ ಹರಿಸಿ ಈ ಆಸ್ತಿ ಪಟ್ಟಣ ಪಂಚಾಯಿತಿ ಕೈ ತಪ್ಪದಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ರಮೇಶ್ ವಾಟಾಳ್ ಒತ್ತಾಯಿಸಿದರು.
ಉಪಾಧ್ಯಕ್ಷ ಸುಬಾನ್ ಷರೀಪ್, ಮುಖ್ಯಾಧಿಕಾರಿ ಬಸವರಾಜಪ್ಪ ಟಾಕಪ್ಪ ಶಿಗ್ಗಾವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.