ADVERTISEMENT

’ಬೆದರಿಕೆಗೆ ಕಾರ್ಯಕರ್ತರು ಹೆದರದಿರಿ’

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಅಭಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 6:40 IST
Last Updated 14 ಡಿಸೆಂಬರ್ 2020, 6:40 IST
ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿದರು
ಹಾಸನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿದರು   

ಹಾಸನ: ‘ಜಿಲ್ಲೆಗೆ ಜೆಡಿಎಸ್‌ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬ ಕಾರ್ಯಕರ್ತರು ಮನೆ– ಮನೆಗೆ ಹೇಳುವ ಮೂಲಕ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಿ, ಯಾರ ಬೆದರಿಕೆ, ದಬ್ಬಾಳಿಕೆಗೂ ಹೆದರುವ ಅಗತ್ಯವಿಲ್ಲ, ನಿಮ್ಮ ಜೊತೆಗೆ ನಾವಿದ್ದೇವೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಕಾರ್ಯಕರ್ತರಿಗೆ ಅಭಯ ನೀಡಿದರು.

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜಿಲ್ಲೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಯ ಕೊಡುಗೆ ಏನು? ಜೆಡಿಎಸ್‌ ಅಧಿಕಾರಾವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದನ್ನು ಕಾರ್ಯಕರ್ತರು ಎಲ್ಲೆಡೆ ಗಟ್ಟಿಯಾಗಿ ಹೇಳಲು ಏಕೆ ಹೆದರುತ್ತೀರಿ’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಆರು ಶಾಸಕರು, ಸಂಸದ, ರಾಜ್ಯಸಭೆ ಸದಸ್ಯರಿದ್ದು, ಯಾಕೆ ಹೆದರಬೇಕು. ಗೂಂಡಾಗಿರಿಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡುತ್ತೇನೆ. ಅವರಿಂದ ನಿಯಂತ್ರಿಸಲು ಸಾಧ್ಯವಾಗದೆ ಇದ್ದರೆ ಮುಂದೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾವು ಹೇದರಿ ಸುಮ್ಮನೆ ಕೂರುವುದಿಲ್ಲ. ರಾಜಕಾರಣ ಇವತ್ತಿಗೆ ಮುಗಿದಿಲ್ಲ ಎಂಬುದನ್ನು ನಮ್ಮ ಕಾರ್ಯಕರ್ತರು ಅರಿಯಬೇಕು’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘1977ರ ವರೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆದಿದ್ದವು. ಆಗ ನಾವು ವಿಜಯ ಪತಾಕೆ ಹಾರಿಸುವ ಮೂಲಕ ಶಕ್ತಿ ತೋರಿಸಿದ್ದೇವೆ. ಈಗ ಪಕ್ಷಾಧಾರಿತ ಚುನಾವಣೆ ಆಗಿಲ್ಲವಾದ್ದರಿಂದ ಕಾರ್ಯಕರ್ತರನ್ನು ಗೆಲ್ಲಿಸಬೇಕಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಅವಸಾನ ಸ್ಥಿತಿ ತಲುಪಿರುವ ಕಾಂಗ್ರೆಸ್ ಒಂದು ಕಡೆಯಾದರೆ ಅಭ್ಯರ್ಥಿಗಳಿಲ್ಲದೆ ನಮ್ಮ ಕಾರ್ಯಕರ್ತರನ್ನು ಸೆಳೆಯಲು ಬಿಜೆಪಿ ಹವಣಿಸುತ್ತಿದೆ. ಪ್ರಾಮಾಣಿಕ ಕಾರ್ಯಕರ್ತರು ಯಾವ ಕಾರಣಕ್ಕೂ ಕುತಂತ್ರಗಳಿಗೆ ಬಲಿಯಾಗಬಾರದು. ಗ್ರಾಮದ ಹಿತದೃಷ್ಟಿಯಿಂದ ತುರ್ತಾಗಿ ಕೆಲಸ ಮಾಡುವ, ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬಿ.ವಿ. ಕರಿಗೌಡ, ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಜಿ.ಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಜಿ.ಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣ, ರಾಮಕೃಷ್ಣ, ಪುಟ್ಟಸ್ವಾಮಿ, ಬಿ.ಟಿ. ಸತೀಶ್, ಸ್ವಾಮಿಗೌಡ, ಅಕ್ಬರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.