ADVERTISEMENT

ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:57 IST
Last Updated 10 ಅಕ್ಟೋಬರ್ 2025, 2:57 IST
ಚನ್ನರಾಯಪಟ್ಟಣದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಏರ್ಪಡಿಸಿದ್ದ ತರಬೇತಿ, ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥಸ್ವಾಮೀಜಿ ಬುಧವಾರ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಪ್ರಮಾಣ ಪತ್ರವಿತರಿಸಿದರು. ಚಂದ್ರಶೇಖರನಾಥ ಸ್ವಾಮೀಜಿ, ಎ.ಟಿ. ಶಿವರಾಂ ಭಾಗವಹಿಸಿದ್ದರು
ಚನ್ನರಾಯಪಟ್ಟಣದ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಏರ್ಪಡಿಸಿದ್ದ ತರಬೇತಿ, ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥಸ್ವಾಮೀಜಿ ಬುಧವಾರ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಪ್ರಮಾಣ ಪತ್ರವಿತರಿಸಿದರು. ಚಂದ್ರಶೇಖರನಾಥ ಸ್ವಾಮೀಜಿ, ಎ.ಟಿ. ಶಿವರಾಂ ಭಾಗವಹಿಸಿದ್ದರು   

ಚನ್ನರಾಯಪಟ್ಟಣ: ಡಿಸೆಂಬರ್‌ನಲ್ಲಿ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟವನ್ನು ಹಾಸನದಲ್ಲಿ ಆಯೋಜಿಸಲಾಗುವುದು ಎಂದು ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಬುಧವಾರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಎರಡು ದಿನ ದೈಹಿಕ ಶಿಕ್ಷಣ ನಿರ್ದೇಶಕರಿಗೆ ಏರ್ಪಡಿಸಿದ್ದ ತರಬೇತಿ ಹಾಗೂ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಕ್ರೀಡಾಕೂಟದ ಉದ್ಘಾಟನೆಗೆ ಅಂತರರಾಷ್ಟ್ರೀಯ ಆಟಗಾರರನ್ನು ಆಹ್ವಾನಿಸಲಾಗುವುದು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಉತ್ತಮ ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಕ್ರೀಡಾ ಸಾಧಕರನ್ನು ಸನ್ಮಾನಿಸಲಾಗುವುದು. ಟೂರ್ನಿ ಯಶಸ್ಸಿಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

ದೈಹಿಕ ಶಿಕ್ಷಣ ವಿಭಾಗ ಶಿಕ್ಷಣ ಕ್ಷೇತ್ರದ ಒಂದು ಪ್ರಮುಖ ಭಾಗ. ಶಿಕ್ಷಣ ಮತ್ತು ಕ್ರೀಡೆ ಎರಡು ಕಣ್ಣುಗಳಿದ್ದಂತೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ದೈಹಿಕ ಶಿಕ್ಷಣ ನಿರ್ದೇಶಕರ ಶ್ರಮ ಸಾಕಷ್ಟಿದೆ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಾಪಾಡಿಕೊಂಡು ಬರಲು ಕ್ರೀಡೆಗಳು ಸಹಕಾರಿಯಾಗಿದೆ. ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ದೂರದೃಷ್ಟಿಯಿಂದ ಶಿಕ್ಷಣ ಮತ್ತು ಕ್ರೀಡೆಗೆ ವಿದ್ಯಾರ್ಥಿಗಳನ್ನು ತೊಡಗಿಸಬೇಕು ಎಂಬ ಆಶಯದಿಂದ ಆದಿಚುಂಚನಗಿರಿ ಮಠದಿಂದ ರಾಜ್ಯಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗುತ್ತಿದೆ. ದೈಹಿಕ ಶಿಕ್ಷಣ ನಿರ್ದೇಶರಕಲ್ಲಿ ಕ್ಷಮತೆ ಹೆಚ್ಚಿಸಲು ಎರಡು ದಿನ ಕಾರ್ಯಾಗಾರ ಏರ್ಪಡಿಸಲಾಗಿತ್ತು ಎಂದು ಹೇಳಿದರು.

ಮಕ್ಕಳಿಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಂಡು ಸೂಕ್ತ ತರಬೇತಿ ನೀಡಿದರೆ, ಕ್ರೀಡಾ ಲೋಕದಲ್ಲಿ ಸಾಧನೆ ಮಾಡಲು ಅನುಕೂಲವಾಗುತ್ತದೆ. ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿದ್ದಾಗ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರಕುತ್ತದೆ ಎಂದು ನುಡಿದರು.

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎರಡು ದಿನ ನಡೆದ ತರಬೇತಿ ಮತ್ತು ಕಾರ್ಯಾಗಾರದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಎ.ಟಿ. ಶಿವರಾಂ, ಎನ್. ಶಿವರಾಮ ರೆಡ್ಡಿ, ಯೋಗ ಗುರು ಎಸ್. ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ ಮೊಹಮ್ಮದ್ ಇಸ್ಮಾಯಿಲ್ ಲತೀಫ್, ಎಸ್.ಎನ್. ರಮೇಶ್, ಸಿ.ಎನ್. ವಿಶ್ವನಾಥ್, ವಸಂತ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.