ADVERTISEMENT

ಕಣ್ಮನ ಸೆಳೆವ ಆದಿನಾಥ, ಪಾರ್ಶ್ವನಾಥ ಬಸದಿ

ಬಸ್ತಿಹಳ್ಳಿಯಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲೆ ನಿರ್ಮಿಸಿದ ಸ್ಮಾರಕ

ಎಚ್.ಎಸ್.ಅನಿಲ್ ಕುಮಾರ್
Published 14 ಮೇ 2022, 16:16 IST
Last Updated 14 ಮೇ 2022, 16:16 IST
ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿ ಆವರಣದ ಶಾಂತಿನಾಥ ಮಂದಿರ (ಎಡಚಿತ್ರ). ಆವರಣದಲ್ಲಿರುವ ಮಾನಸ್ತಂಭ
ಹಳೇಬೀಡಿನ ಬಸ್ತಿಹಳ್ಳಿಯ ಜೈನ ಬಸದಿ ಆವರಣದ ಶಾಂತಿನಾಥ ಮಂದಿರ (ಎಡಚಿತ್ರ). ಆವರಣದಲ್ಲಿರುವ ಮಾನಸ್ತಂಭ   

ಹಳೇಬೀಡು: ವಿಶಿಷ್ಟ ಶೈಲಿಯ ಕುಸರಿ ಕೆತ್ತನೆ ಕಂಬ, ಮಂತ್ರಮುಗ್ಧಗೊಳಿಸುವ ಗರ್ಭಗುಡಿ, ತೀರ್ಥಂಕರ ಮೂರ್ತಿಗಳು, ಹಳೆಗನ್ನಡದ ಶಿಲಾಶಾಸನ, ಕಣ್ಮನ ಸೆಳೆಯುವ ಸಭಾ ಮಂಟಪ...

ಇವು ಹಳೇಬೀಡಿನ ಬಸ್ತಿಹಳ್ಳಿಯ ಜಿನ ಮಂದಿರದಲ್ಲಿ ಕಂಡು ಬರುವ ದೃಶ್ಯಗಳು. ಜೈನ ಬಸದಿ ಆವರಣ ಪ್ರವೇಶಿಸಿದರೆ ಆಕರ್ಷಕ ಕಲಾಕೃತಿ ಗಮನ ಸೆಳೆಯುತ್ತದೆ.

ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದ ರಾಣಿ ಶಾಂತಲೆ ನಿರ್ಮಿಸಿದ್ದಾಳೆ ಎನ್ನಲಾಗುವ ಶಾಂತಿನಾಥ ಬಸದಿ, ದಂಡನಾಯಕ ಬೊಪ್ಪ ಎಂಬಾತ ನಿರ್ಮಿಸಿರುವ ಆದಿನಾಥ ಮತ್ತು ಪಾರ್ಶ್ವನಾಥ ಬಸದಿಗಳು ನೋಡುಗರ ಕಣ್ಮನ ಸೆಳೆಯುತ್ತವೆ.

ADVERTISEMENT

ಮೂರು ಬಸದಿಗಳಲ್ಲಿರುವ ದಿಗಂಬರ ಮೂರ್ತಿಗಳು ವೈರಾಗ್ಯದ ಸ್ಥಿತಿ ಪ್ರಕಟಪಡಿಸುವುದಲ್ಲದೆ, ಅಹಿಂಸೆಯ ದ್ಯೋತಕವಾಗಿಯೂ ಕಂಡು ಬರುತ್ತದೆ. ಶಾಂತಿನಾಥ ಬಸದಿಯ ಧ್ಯಾನಸ್ಥ ಮಹಾವೀರ ತೀರ್ಥಂಕರರ ಮೂರ್ತಿ ಆಧ್ಯಾತ್ಮಿಕನೆಲೆಗೆ ಕೊಂಡೊಯ್ಯುತ್ತದೆ.

ವಿಜಯಿ ಪಾರ್ಶ್ವನಾಥ ಬಸದಿಯಲ್ಲಿ 14, ಶಾಂತಿನಾಥ ಬಸದಿಯಲ್ಲಿ 12 ಕಂಬಗಳಿವೆ.ಸೂಕ್ಷ್ಮ ಕೆತ್ತನೆಯಿಂದ ಕಂಬ ಗಳಲ್ಲಿ ಕಲೆ ಅರಳಿಸಲಾಗಿದೆ. ನುಣುಪಾದ ಬಳಪದ ಕಲ್ಲಿನಲ್ಲಿರೂಪಿಸಿರುವ ಕಂಬಗಳಿಗೆ ಕಪ್ಪು ಬಣ್ಣದಲ್ಲಿ ಕನ್ನಡಿಯ ಹೊಳಪು ನೀಡಲಾಗಿದೆ.

ನೆರಳು ಬೆಳಕಿನಾಟದಲ್ಲಿ ಹೊಳೆಯುವ ಕಂಬಗಳಲ್ಲಿ ಬೆಳಕಿನ ವಕ್ರೀಭವನ ಹಾಗೂ ಪ್ರತಿಫಲನದ ಮೂಲಕ ವಿವಿಧ ಪ್ರಾಣಿ, ಪಕ್ಷಿಗಳ ಆಕೃತಿಗಳು ಮೂಡಿ ಬರುವುದು ಸೋಜಿಗ. ಕೆಲ ಕಂಬಗಳಲ್ಲಿ ವ್ಯಕ್ತಿಗಳ ಚಿತ್ರ ನಿಮ್ನ (ಕಾನ್ಕೇವ್‌) ಹಾಗೂ ಪೀನ (ಕಾನ್ವೆಕ್ಸ್)ಮಸೂರದ ಪರಿಣಾಮದಲ್ಲಿ ಕಾಣುವುದು ಮತ್ತೊಂದು ವಿಶೇಷ.

800 ವರ್ಷಗಳ ಹಿಂದೆ ನಿರ್ಮಾಣವಾಗಿರುವ 15ಕ್ಕೂ ಹೆಚ್ಚು ಕಂಬಗಳಲ್ಲಿ ಈ ರೀತಿಯ ಬೆಳಕಿನ ಪರಿಣಾಮಗಳನ್ನು ಕಾಣಬಹುದು. ಪಾರ್ಶ್ವನಾಥ ಬಸದಿಯ ಒಂದುಕಂಬದ ಮುಂದೆ ನಿಂತಾಗ ಪ್ರತಿಬಿಂಬ ತಲೆಕೆಳಗಾಗಿ ಕಾಣುತ್ತದೆ.

ವಿಜಯಿ ಪಾರ್ಶ್ವನಾಥ ಮೂರ್ತಿ 18 ಅಡಿ ಎತ್ತರವಿದೆ. ಮೂರ್ತಿಯ ಶಿರದ ಮೇಲೆ ಎಡೆಬಿಟ್ಟಿರುವ ಸರ್ಪ ಹಾಗೂ ಎರಡೂ ಬದಿಯ ಯಕ್ಷ, ಯಕ್ಷಿಯ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. 18 ಅಡಿ ಎತ್ತರದ ಶಾಂತಿನಾಥ ವಿಗ್ರಹದ ತಲೆಯಲ್ಲಿನಗುಂಗುರು ಕೂದಲುಗಳನ್ನು ಎಣಿಕೆ ಮಾಡಬಹುದಾದಷ್ಟು ನವಿರಾದ ಕೆತ್ತನೆಯಿದೆ.ಆದಿನಾಥ ಮೂರ್ತಿಯ ವಿಗ್ರಹ ಮೂರು ಅಡಿ ಎತ್ತರವಿದೆ.

ಬಸದಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಳಗನ್ನಡದಲ್ಲಿ ಬರೆದಿರುವ ಜಿನಶಾಸನಲಭ್ಯವಿದೆ. ಶಾಸನದ ಮೇಲ್ಭಾಗದಲ್ಲಿ ಧ್ಯಾನಸ್ಥ ತೀರ್ಥಂಕರರ ವಿಗ್ರಹವಿದ್ದು, ಯಕ್ಷ–ಯಕ್ಷಿ ಹಾಗೂ ಶಾಸನದ ತಿರುಳಿಗೆ ಸಂಬಂಧಿಸಿದ ಚಿತ್ರ ಬಿಡಿಸಲಾಗಿದೆ.

ಶಾಂತಿನಾಥ ಬಸದಿ ಮುಂಭಾಗದ ಮಾನಸ್ತಂಭ 20 ಅಡಿ ಎತ್ತರವಿದ್ದು, ಕಂಬದ ಮೇಲ್ಭಾಗದಲ್ಲಿ ಯಕ್ಷ ಬ್ರಹ್ಮದೇವರ ವಿಗ್ರಹವಿದೆ. ಆದಿನಾಥ ಮಂದಿರದ (ಜಿನವಾಣಿ) ಸರಸ್ವತಿ, ಪಾರ್ಶ್ವನಾಥ ಮಂದಿರದ ಕೂಶ್ಮಾಂಡಿನಿ ವಿಗ್ರಹ ಆಕರ್ಷಕವಾಗಿವೆ.

ತಲುಪುವ ಮಾರ್ಗ

ಹಳೇಬೀಡು ಬಸ್ ನಿಲ್ದಾಣದಿಂದ ಹಗರೆ ರಸ್ತೆಯಲ್ಲಿ ಅರ್ಧ ಕಿ.ಮೀ ದೂರದಲ್ಲಿದೆ ಬಸ್ತಿಹಳ್ಳಿ. ಬಸ್ತಿಹಳ್ಳಿ ವೃತ್ತದಿಂದ ಎಡಕ್ಕೆ ಸಾಗಿದರೆ ಜೈನ ಬಸದಿ ಕಾಣ ಸಿಗುತ್ತವೆ. ಹಾಸನ ಜಿಲ್ಲಾ ಕೇಂದ್ರದಿಂದ 30 ಕಿ.ಮೀ, ಬೇಲೂರಿನಿಂದ 16 ಕಿ.ಮೀ ದೂರದಲ್ಲಿದೆ.

***

ಬಸ್ತಿಹಳ್ಳಿ ಬಸದಿಗಳು ಉತ್ತರ ಭಾರತದ ಜೈನ ಯಾತ್ರಾರ್ಥಿ ಗಳನ್ನು ಆಕರ್ಷಿಸಿವೆ. ಬಸದಿಗಳು ಧ್ಯಾನಕ್ಕೆ ಸೂಕ್ತ ಸ್ಥಳ. ಹೀಗಾಗಿ ಜೈನ ಮುನಿಗಳು ಇಷ್ಟಪಡುತ್ತಾರೆ.

–ಜೈಕುಮಾರ್ ಬಾಬು, ಅರ್ಚಕ

***

ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ, ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಾರ್ಯ ಪ್ರವೃತ್ತವಾಗಬೇಕು.

–ಧರಣೇಂದ್ರ, ರೈತ, ಅಡಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.